ಕ್ರೀಡೆ

ನಂ1 ರ್ಯಾಕಿಂಗ್ ಮೇಲೆ ಸೈನಾ ಕಣ್ಣು

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ನ ಮಹಿಳೆಯರ ಸಿಂಗಲ್ಸ್ ವಿಭಾಗದ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಅವರಿಗೆ ನಂಬರ್ ಒನ್ ಪಟ್ಟಕ್ಕೇರಲು ಮಂಗಳವಾರದಿಂದ ಆರಂಭಗೊಳ್ಳಲಿರುವ ಇಂಡಿಯಾ ಓಪನ್ ಸೂಪರ್ ಸೀರಿಸ್ ಪಂದ್ಯಾವಳಿ ವೇದಿಕೆಯಾಗಿ ಪರಿಣಮಿಸಲಿದೆ.

ಇಲ್ಲಿನ ಸಿರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿ ನಡೆಯಲಿರುವ ರು. 1 ಕೋಟಿ 71 ಲಕ್ಷ ಬಹುಮಾನ ಮೊತ್ತದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ನಂಬರ್ ಒನ್ ಪಟ್ಟಕ್ಕೇರಲು ಸೈನಾ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಸದ್ಯಕ್ಕೆ ಹಾಲಿ ವಿಶ್ವ ಚಾಂಪಿಯನ್ ಸ್ಪೇನ್‍ನ ಕೆರೊಲಿನಾ ಮರಿನ್ ಅವರ ಬೆಂಬಲ ಪೈಪೋಟಿಯನ್ನು ಸೈನಾ ಎದರಿಸಬೇಕಿದೆ.

ಇದರಲ್ಲಿ ಕೆರೊಲಿನಾ ಸಫಲರಾಗಿ ನಂಬರ್ ಒನ್ ಪಟ್ಟ ಏರಿದರೆ, ಕಳೆದ ನಾಲ್ಕು ವರ್ಷಗಳಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನೀಯೇತರ ಆಟಗಾರ್ತಿಯೊಬ್ಬರು ಅಗ್ರಸ್ಥಾನ ಅಲಂಕರಿಸಿದಂತಾಗುತ್ತದೆ. ಸೈನಾಗೆ ಈ ಬಾರಿ ಅದೃಷ್ಟ ಕೈ ಹಿಡಿದರೆ, ಭಾರತೀಯರೊಬ್ಬರು ಇದೇ ಮೊದಲ ಬಾರಿಗೆ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದಂತಾಗುತ್ತದೆ. ಹಾಗಾಗಿ, ಈ ಇಬ್ಬರಲ್ಲಿ ಯಾರು ಈ ರ್ಯಾಕಿಂಗ್ ಕದನ ಗೆಲ್ಲುತ್ತಾರೆ ಎನ್ನುವುದು ಕುತೂಹಲದ ವಿಚಾರ.

SCROLL FOR NEXT