ನವದೆಹಲಿ: ಐಸಿಸಿ ವಿಶ್ವಕಪ್ ಪಂದ್ಯದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪರಾಭವಗೊಂಡಿದ್ದಕ್ಕೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಭಾರೀ ಖುಷಿಯಾಗಿದ್ದಾರಂತೆ. ಆ ಖುಷಿಯನ್ನು ಅವರು ವ್ಯಕ್ತ ಪಡಿಸಿದ್ದು ಹೇಗೆ ಗೊತ್ತಾ? ಬಿಸಿಸಿಐಗೆ ಕರೆ ಮಾಡಿ ಹಾಡು ಹಾಡುವ ಮೂಲಕ!
ಮುಂಬೈನಲ್ಲಿರುವ ಬಿಸಿಸಿಐ ಕಚೇರಿಗೆ ಕರೆ ಮಾಡಿದ ಪಾಕ್ ಮತ್ತು ಬಾಂಗ್ಲಾದೇಶದ ಅಭಿಮಾನಿಗಳು ವಿಶ್ವಕಪ್ ಕ್ರಿಕೆಟ್ ವೇಳೆ ಪ್ರಸಾರವಾಗುತ್ತಿದ್ದ #We wont give it back ಎಂದು ಹೇಳುವ ಮೌಕಾ ಮೌಕಾ ಜಾಹೀರಾತಿನ ಮೌಕಾ ಮೌಕಾ ಹಾಡನ್ನು ಹಾಡಿ ಟೀಂ ಇಂಡಿಯಾವನ್ನು ಲೇವಡಿ ಮಾಡಿದ್ದಾರೆ.
ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ ಬಿಸಿಸಿಐ ಕಚೆರಿಗೆ ಸುಮಾರು 200 ಕರೆಗಳು ಬಂದಿದ್ದು, ಈ ಎಲ್ಲಾ ಕರೆಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದವುಗಳಾಗಿವೆ. ಕರೆ ಮಾಡಿದ ವ್ಯಕ್ತಿಗಳು ಮೌಕಾ ಮೌಕಾ! ಕ್ಯಾ ಹುವಾ ಮೌಕೇ ಕಾ? (ಅವಕಾಶ..ಏನಾಯ್ತು ಅವಕಾಶ?) ಎಂದು ಕೇಳುವ ಮೂಲಕ ಪರಿಹಾಸ್ಯ ಮಾಡುತ್ತಿದ್ದಾರೆ.
ಟೀವಿ ಜಾಹೀರಾತಿನಲ್ಲಿ ಪಾಕಿಸ್ತಾನದ ಅಭಿಮಾನಿ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆದ್ದು, ಪಟಾಕಿ ಹೊಡೆಯಲು ಕಾಯುತ್ತಿರುತ್ತಾನೆ. ಪ್ರತೀ ವರ್ಷವೂ ಆತ ಪಾಕಿಸ್ತಾನ ಗೆಲ್ಲುತ್ತೆ ಎಂದು ಪಟಾಕಿ ತಂದಿಡುತ್ತಾ ಇರುತ್ತಾನೆ. ಆದರೆ ಪಟಾಕಿ ಹೊಡೆಯಲು ಆತನಿಗೆ ಅವಕಾಶವೇ ಸಿಗುವುದಿಲ್ಲ. ಈ ಜಾಹೀರಾತು ಜನಪ್ರಿಯ ಆದ ಕೂಡಲೇ ಭಾರತ ಯಾವ ರಾಷ್ಟ್ರದ ವಿರುದ್ಧ ಪಂದ್ಯವನ್ನಾಡುತ್ತಿದೆಯೋ ಆ ರಾಷ್ಟ್ರದ ಅಭಿಮಾನಿಗಳು ಭಾರತ ಪರಾಭವಗೊಳ್ಳಲು ಕಾಯುವುದು, ಮೌಕಾ ಮೌಕಾ ಎಂದು ಹಾಡುವುದು, ಭಾರತ ವಿಶ್ವಕಪ್ ವಾಪಸ್ ಕೊಡಲ್ಲ ಎಂದು ಸಾರುವ WE WONT GIVE IT BACK ಎಂಬ ಸ್ಲೋಗನ್ ಬರುತ್ತಿತ್ತು. ವಿಶ್ವಕಪ್‌ನಲ್ಲಿ ಭಾರತ 7 ಪಂದ್ಯಗಳನ್ನು ಗೆಲ್ಲುವುದರ ಜತೆಗೇ ಈ ಜಾಹೀರಾತು ಸರಣಿ ಜನಪ್ರಿಯವಾಗುತ್ತಾ ಬಂತು.
ಗುರುವಾರ ಸೆಮಿಫೈನಲ್‌ನಲ್ಲಿ ಭಾರತ 95 ರನ್‌ಗಳಿಗೆ ಪರಾಭವಗೊಂಡಾಗ ಪಾಕ್ ಮತ್ತು ಬಾಂಗ್ಲಾದೇಶದ ಜನರು ಹೆಚ್ಚು ಸಂತಸಗೊಂಡಿದ್ದರು. ಬಿಸಿಸಿಐ ವೆಬ್‌ಸೈಟ್‌ನಿಂದ ಕಚೇರಿಯ ನಂಬರ್ ತೆಗೆದುಕೊಂಡು ಅವರು ಕರೆ ಮಾಡಿ ಮೌಕಾ ಮೌಕಾ ಹಾಡು ಹಾಡಿ ನಮ್ಮನ್ನು ಕಿರಿಕಿರಿ ಮಾಡುತ್ತಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿದೆ.