ಕ್ರೀಡೆ

ಮುಗ್ಗರಿಸಿದ ಕರ್ನಾಟಕ

Srinivasamurthy VN

ಕೊಚ್ಚಿ: ಆರಂಭಿಕ ಬ್ಯಾಟ್ಸ್‍ಮನ್ ತಿರುಮಲಶೆಟ್ಟಿ ಸುಮನ್ (100 ರನ್, 60 ಎಸೆತ, 9 ಬೌಂಡರಿ, 7 ಸಿಕ್ಸರ್) ಅವರ ಸ್ಫೋಟಕ ಶತಕದ ಪರಿಣಾಮ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಹೈದರಾಬಾದ್ ವಿರುದ್ಧ ಮುಖಭಂಗ ಅನುಭವಿಸಿದೆ.

ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ವಲಯದ ಪಂದ್ಯದಲ್ಲಿ ಹೈದರಾಬಾದ್ ತಂಡ, ಕರ್ನಾಟಕ ವಿರುದ್ಧ 31 ರನ್‍ಗಳ ಗೆಲವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೈದರಾಬಾದ್ ತಂಡ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿತು. ನಂತರ ಕರ್ನಾಟಕ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 131 ರನ್ ದಾಖಲಿಸಲಷ್ಟೇ ಶಕ್ತವಾಯಿತು.

ಸುಮನ್ ಸುನಾಮಿ
ಹೈದರಾಬಾದ್ ತಂಡಕ್ಕೆ ಆರಂಭಿಕರಾದ ಟಿ.ಸುಮನ್ ಹಾಗೂ ತನ್ಮಯ್ ಅಗರ್‍ವಾಲ್ 54 ರನ್‍ಗಳ ಉತ್ತಮ ಆರಂಭ ಕೊಟ್ಟರು. ತನ್ಮಯ್ ವಿಕೆಟ್ ಬಿದ್ದ ನಂತರ, ಬಂದ ಬಹುತೇಕ ಎಲ್ಲ ಬ್ಯಾಟ್ಸ್ ಮನ್ ಗಳು ಹೆಚ್ಚು ರನ್ ಗಳಿಸಲು ಪರದಾಡಿದರು. ಅಬ್ಬರಿಸಿದ ಸುಮನ್ ಕರ್ನಾಟಕದ  ಬೌಲರ್‍ಗಳಿಗೆ ಕಬ್ಬಿಣದ ಕಡಲೆಯಾದರು. ಕರ್ನಾಟಕದ ಪರ ಎಚ್.ಎಸ್ ಶರತ್, ರೋನಿತ್ ಮೋರೆ, ಜೆ.ಸುಚಿತ್, ನವೀನ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.

ತತ್ತರಿಸಿದ ಕರ್ನಾಟಕ
ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ ಆರಂಭದಿಂದಲೇ ಕುಸಿತ ಕಂಡಿತು. 16 ರನ್ ಗಳಿಸುವಷ್ಟರಲ್ಲೇ ಆರಂಭಿಕ 4 ವಿಕೆಟ್ ಕಳೆದುಕೊಂಡ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತು. ಆನಂತರ ಮನೀಷ್ ಪಾಂಡೆ (30) ಹಾಗೂ ಶ್ರೇಯಸ್ ಗೋಪಾಲ್ (39) ಸ್ವಲ್ಪ ರನ್ ಗಳಿಸಿದರಾದರೂ ಪ್ರಯೋಜನವಾಗಲಿಲ್ಲ. ಹೈದರಾಬಾದ್ ಪರ ಆಶಿಶ್ ರೆಡ್ಡಿ 4, ರವಿಕಿರಣ್, ಪ್ರಗ್ಯಾನ್ ಓಜಾ, ಭಂಡಾರಿ, ಮಿಲಿಂದ್ ತಲಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಹೈದರಾಬಾದ್ 20 ಓವರ್‍ಗಳಲ್ಲಿ 5 ವಿಕೆಟ್‍ಗೆ 162 (ಸುಮನ್
100, ತನ್ಮಯ್ 29, ನವೀನ್ 10ಕ್ಕೆ1, ಶ್ರೇಯಸ್ 21ಕ್ಕೆ1)
ಕರ್ನಾಟಕ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 131 (ಶ್ರೇಯಸ್ 39,
ಮನೀಷ್ 30, ಆಶಿಶ್ ರೆಡ್ಡಿ 22ಕ್ಕೆ4, ರವಿಕಿರಣ್ 15ಕ್ಕೆ1)

SCROLL FOR NEXT