ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ ಗಳ ಪ್ರಾಬಲ್ಯ ಮೆರೆದಿದ್ದು, ನ್ಯೂಜಿಲೆಂಡ್ ತಂಡದ 6 ವಿಕೆಟ್ ಗಳು ಪತನವಾಗಿದೆ.
ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (15ರನ್), ಮೆಕ್ಕಲಮ್ (0) ಮತ್ತು ವಿಲಿಯಮ್ಸನ್ (12) ಬೇಗನೆ ಪೆವಿಲಿಯನ್ ಸೇರಿಸಿಕೊಳ್ಳುವುದರೊಂದಿಗೆ ನ್ಯೂಜಿಲೆಂಡ್ ತಂಡ ಆರಂಭಿಕ ಆಘಾತಕ್ಕೊಳಗಾಯಿತು. ಆದರೆ ಈ ಹಂತದಲ್ಲಿ ಕ್ರೀಸ್ ಗಿಳಿದ ಟೇಲರ್ ಮತ್ತು ಎಲಿಯಟ್ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾಗುವ ಭರವಸೆ ನೀಡಿದರಾದರೂ, ತಂಡದ ಮೊತ್ತ 150 ರನ್ ಗಳಾಗಿದ್ದಾಗ ಫಾಲ್ಕನರ್ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ಟೇಲರ್ ಹಡ್ಡಿನ್ ಗೆ ಕ್ಯಾಚಿತ್ತು ಹೊರನಡೆದರು. ಆಗ ಟೇಲರ್ ಅವರ ವೈಯುಕ್ತಿ ಮೊತ್ತ 40 ರನ್ ಗಳಾಗಿತ್ತು.
ಟೇಲರ್ ಹಿಂದೆಯೇ ಆ್ಯಂಡರ್ ಸನ್ ಮತ್ತು ರೋಂಚಿ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಇಬ್ಬರು ಆಟಗಾರರು ಕೇವಲ ಶೂನ್ಯಕ್ಕೆ ಔಟಾಗುವುದರೊಂದಿಗೆ ನ್ಯೂಜಿಲೆಂಡ್ ತೀವ್ರ ಸಂಕಷ್ಟದ ಸ್ಥಿತಿ ತಲುಪಿದೆ. ಪ್ರಸ್ತುತ 73 ರನ್ ಗಳಿಸಿರುವ ಎಲಿಯಟ್ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾಗಿದ್ದು, ಡೇನಿಯಲ್ ವೆಟ್ಟೋರಿ ಅವರಿಗೆ ಸಾಥ್ ನೀಡಿದ್ದಾರೆ. ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 39 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.
ಆಸ್ಟ್ರೇಲಿಯಾ ಪರ ಸ್ಟಾರ್ಕ್ 2 ವಿಕೆಟ್, ಫಾಲ್ಕ್ ನರ್ 2 ವಿಕೆಟ್ ಮತ್ತು ಮ್ಯಾಕ್ಸ್ ವೆಲ್ ಮತ್ತು ಜಾನ್ಸನ್ ತಲಾ 1 ವಿಕೆಟ್ ಪಡೆದಿದ್ದಾರೆ.