ಸಿಡ್ನಿ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ಇಂಗ್ಲೆಂಡ್ ವಿರುದ್ಧ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಗಳಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ.
ಲೆಗ್ ಸ್ಪಿನ್ನರ್ ಫವಾದ್ ಅಹ್ಮದ್, ಬ್ಯಾಟ್ಸ್‍ಮನ್ ಆ್ಯಡಮ್ ವೋಗ್ಸ್ ಹಾಗೂ ವಿಕೆಟ್ ಕೀಪರ್ ಪೀಟರ್ ನೆವಿಲ್ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿರುವುದು ಅಚ್ಚರಿಯ ಆಯ್ಕೆಯಾಗಿದೆ. ಈ ಮಧ್ಯೆ ವಿಶ್ವಕಪ್‍ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ತಂಡವನ್ನು ಪ್ರತಿನಿಧಿಸಿದ್ದ ಆಲ್‍ರೌಂಡರ್‍ಗಳಾದ ಜೇಮ್ಸ್ ಫಾಲ್ಕನರ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅವರಿಗೆ 17 ಆಟಗಾರರ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿಲ್ಲ. ಮೈಕೆಲ್ ಕ್ಲಾರ್ಕ್ ನಾಯಕತ್ವದಲ್ಲಿರುವ ಆಸ್ಟ್ರೇಲಿಯಾ ತಂಡ, ಜೂನ್ 5ರಿಂದ ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಬಳಿಕ ಜುಲೈ 5ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಫವಾದ್, ಆ್ಯಡಮ್ ಮತ್ತು ಪೀಟರ್ ಅವರು ದೇಶೀಯ ಲೀಗ್‍ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಆಯ್ಕೆದಾರರ ಗಮನ ಸೆಳೆದು, ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ಸಫಲರಾಗಿದ್ದಾರೆ. ಬ್ರಾಡ್ ಹ್ಯಾಡಿನ್ ವಿಕೆಟ್ ಕೀಪರ್ ಆಗಿದ್ದಾರೆ. ಮತ್ತೊಬ್ಬ ವಿಕೆಟ್ ಕೀಪರ್ ನ್ಯೂ ಸೌಥ್ ವೇಲ್ಸ್‍ನ ನೆವಿಲ್‍ಗೆ ಸ್ಥಾನ ನೀಡಲಾಗಿದ್ದು, ಮ್ಯಾಥ್ಯೂ ವೇಡ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಆಸ್ಟ್ರೇಲಿಯಾ ತಂಡ: ಮೈಕೆಲ್ ಕ್ಲಾರ್ಕ್ (ನಾಯಕ), ಸ್ಟೀವನ್ ಸ್ಮಿತ್, ಫವಾದ್ ಅಹ್ಮದ್, ಬ್ರಾಡ್ ಹ್ಯಾಡಿನ್, ರಯಾನ್ ಹ್ಯಾರಿಸ್ (ಆ್ಯಷಸ್‍ಗೆ ಮಾತ್ರ), ಜೋಶ್ ಹ್ಯಾಜಲ್‍ವುಡ್, ಮಿಚೆಲ್ ಜಾನ್ಸನ್, ನಾಥನ್ ಲಿಯಾನ್, ಮಿಚೆಲ್ ಮಾರ್ಶ್, ಶಾನ್ ಮಾರ್ಶ್, ಪೀಟರ್ ನೆವಿಲ್, ಕ್ರಿಸ್ ರೋಜರ್ಸ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ಆ್ಯಡಮ್ ವೋಗ್ಸ್, ಡೇವಿಡ್ ವಾರ್ನರ್, ಶೇನ್ ವ್ಯಾಟ್ಸನ್.