ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು 8ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಎರಡನೇ ಬಾರಿಯ ಮುಖಾಮುಖಿಯಲ್ಲೂ ಸೋಲುಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 24 ರನ್‍ಗಳ ಆಘಾತ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಚಿಪಾಕ್‍ನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 149 ರನ್‍ಗಳ ಗುರಿ ಬೆಂಬತ್ತಿದ್ದ ಬೆಂಗಳೂರು ತಂಡಕ್ಕೆ 124 ರನ್‍ಗಳಿಸಲಷ್ಟೇ ಸಾಧ್ಯವಾಯಿತು.
ಆರಂಭಿಕ ವಿರಾಟ್ ಕೊಹ್ಲಿ (48ರನ್, 44 ಎಸೆತ, 2 ಬೌಂಡರಿ, 1 ಸಿಕ್ಸರ್) ಸ್ವಲ್ಪ ಹೋರಾಟ ನಡೆಸಿದ್ದು ಬಿಟ್ಟರೆ, ಇತರೆ ಬ್ಯಾಟ್ಸ್‍ಮನ್‍ಗಳ ಕೆಟ್ಟ ಪ್ರದರ್ಶನದ ಪರಿಣಾಮ ಆರ್‍ಸಿಬಿಗೆ ಸೋಲು ಎದುರಾಯಿತು. ಈ ಪಂದ್ಯದಿಂದ ಕ್ರಿಸ್ ಗೇಯ್ಲ್ ಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಸ್ಥಾನದಲ್ಲಿ ನಾಯಕ ಕೊಹ್ಲಿ ಜೊತೆಗೆ ಆರ್‍ಸಿಬಿ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೂಲದ ನಿಕ್ ಮ್ಯಾಡಿನ್ಸನ್ ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಅವರು ಕೇವಲ 4 ರನ್‍ಗಳಿಸಿ ವಿಕೆಟ್ ಕೈಚೆಲ್ಲಿದರು. ಚೆನ್ನೈನ ಬೌಲರ್‍ಗಳು ಉತ್ತಮ ಲೈನ್ ಅಂಡ್ ಲೆಂಗ್ತ್ ದಾಳಿ ನಡೆಸಿ ಆರ್‍ಸಿಬಿ ದಾಂಡಿಗರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಆಶಿಶ್ ನೆಹ್ರಾ 3 ಹಾಗೂ ಈಶ್ವರ್ ಪಾಂಡೆ ಮತ್ತು ಡ್ವೈನ್ ಬ್ರಾವೊ ತಲಾ 2 ವಿಕೆಟ್ ಕಬಳಿಸಿದರು.
ಚೆನ್ನೈ ಸ್ಪರ್ಧಾತ್ಮಕ ಮೊತ್ತ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 148 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಎಡಗೈ ಬ್ಯಾಟ್ಸ್‍ಮನ್ ಸುರೇಶ್ ರೈನಾ ಅರ್ಧಶತಕ ಗಳಿಸಿ ತಂಡದ ಉತ್ತಮ ಸ್ಥಿತಿಗೆ ಕಾರಣರಾದರು. ಅವರು, 46 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸೇರಿದಂತೆ 52 ರನ್‍ಗಳಿಸಿ ನಿರ್ಗಮಿಸಿದರು. ಆದರೆ, ಇತರೆ ಬ್ಯಾಟ್ಸ್ ಮನ್ ಗಳು ನಿರೀಕ್ಷಿತ ಮಟ್ಟದಲ್ಲಿ ಅಬ್ಬರಿಸಲು ವಿಫಲರಾದ ಪರಿಣಾಮ ಚೆನ್ನೈ ಮೊತ್ತ ಬೃಹತ್ ಮೊತ್ತ ತಲುಪಲಿಲ್ಲ.
ಚೆನ್ನೈಗೆ ಶುರುವಿನಲ್ಲೇ ದೊಡ್ಡ ಆಘಾತ ಕಾದಿತ್ತು. ಆಸ್ಟ್ರೇಲಿಯಾ ಮೂಲದ ವೇಗಿ ಮಿಚೆಲ್ ಸ್ಟಾರ್ಕ್ ಇನಿಂಗ್ಸ್‍ನ ಮೊದಲ ಓವರಿನ ಕೊನೆಯ ಎಸೆತದಲ್ಲಿ ಡ್ವೈನ್ ಸ್ಮಿತ್ ವಿಕೆಟ್ ಉರುಳಿಸಿದರು. ಆಗ ಚೆನ್ನೈ ಕೂಡ ಖಾತೆ ತೆರೆದಿರಲಿಲ್ಲ. ಸ್ಟಾರ್ಕ್ ರ ಒಳನುಗ್ಗಿಬಂದ ಚೆಂಡು ಸ್ಮಿತ್‍ರ ಕಣ್ತಪ್ಪಿಸಿ ಸ್ಟಂಪ್ ಮಾರುದ್ದ ದೂರ ಹೋಗಿಬೀಳುವಂತೆ ಮಾಡಿತು. ಇತರೆ ಪ್ರಮುಖ ಬ್ಯಾಟ್ಸ್ ಮನ್‍ಗಳ ಪೈಕಿ ನಾಯಕ ಮಹೇಂದ್ರ ಸಿಂಗ್ ದೋನಿ 18 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ ಗಳು ಸೇರಿದಂತೆ 29 ರನ್‍ಗಳಿಸಿ ವಿಕೆಟ್ ಒಪ್ಪಿಸಿದ್ದು, ತಂಡದ ಪರ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತವಾಯಿತು. ಫ್ಯಾಪ್ ಡು ಪ್ಲೆಸಿಸ್ (24) ಮತ್ತು ಬ್ರೆಂಡನ್ ಮೆಕಲಂ (20) ಅಲ್ಪ ಸ್ವಲ್ಪ ಕಾಣಿಕೆ ನೀಡಿದ್ದರಿಂದ ತಂಡ 150ರ ಗಡಿಯ ಸಮೀಪ ಬಂದು ನಿಲ್ಲುವಂತಾಯಿತು.