ರಾಯ್ಪುರ: ಶಿಸ್ತುಬದ್ಧ ಬೌಲಿಂಗ್ ಹಾಗೂ ಆರಂಭಿಕ ಶ್ರೇಯಸ್ ಅಯ್ಯರ್‍ರ ಬಿರುಸಿನ ಬ್ಯಾಟಿಂಗ್‍ನ ನೆರವಿನಿಂದ ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್
ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‍ಗಳಿಂದ ಮಣಿಸಿತು.
ಇಲ್ಲಿನ ಶಹೀದ್ ವೀರ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ, 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 119 ರನ್ ಗಳ ಸಾಧಾರಣ ಮೊತ್ತ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡ, 16.4 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿ, ಜಯದ ನಗೆ ಬೀರಿತು.
ತಲೆಕೆಳಗಾದ ಧೋನಿ ಲೆಕ್ಕ: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡದ ನಾಯಕ ಧೋನಿಯವರ ಲೆಕ್ಕಾಚಾರ ತಲೆಕೆಳಗಾಯಿತು. ಟಿ20 ಪಂದ್ಯವೊಂದಕ್ಕೆ
ಸಿಗಬೇಕಾದ ರಭಸದ ಆರಂಭ ಚೆನ್ನೈ ತಂಡದ ಆರಂಭಿಕರಾದ ಡ್ವೈನ್ ಸ್ಮಿತ್ ಹಾಗೂ ಬ್ರೆಂಡಾನ್ ಮೆಕಲಂ ಅವರಿಂದ ಹೊರಹೊಮ್ಮಲಿಲ್ಲ.
ಮೊದಲ ಐದು ಓವರ್ ಗಳಲ್ಲಿ ಈ ಜೋಡಿ ಪೇರಿಸಿದ್ದು ಬರೀ 16 ರನ್. ಇದಕ್ಕೆ ಕಾರಣ, ಡೆಲ್ಲಿ ತಂಡದ ಬೌಲರ್‍ಗಳಾದ ಜಹೀರ್ ಖಾನ್ ಹಾಗೂ ಶಹಬಾಜ್ ನದೀಮ್. ಕರಾರುವಾಕ್ ನೇರ ಹಾಗೂ ಅಂತರದಲ್ಲಿ ಚೆಂಡನ್ನು ಎಸೆದ ಈ ಇಬ್ಬರೂ ಆರಂಭಿಕರ ಆಕ್ರಮಣಕಾರಿ ಪ್ರವೃತ್ತಿ ಹೆಡೆಯೆತ್ತದಂತೆ ನೋಡಿಕೊಂಡರು.
ಆನಂತರದ ಅವಧಿಯಲ್ಲಿ ದಾಳಿಗಿಳಿದ ಜಯಂತ್ ಯಾದವ್, ಚೆನ್ನೈ ತಂಡಕ್ಕೆ ಮತ್ತಷ್ಟು ಕಡಿವಾಣ ಹಾಕಿದರು. ಇನಿಂಗ್ಸ್‍ನ 6ನೇ ಓವರ್‍ನಲ್ಲಿ ಜಹೀರ್ ಖಾನ್, ಬ್ರೆಂಡಾನ್ ಮೆಕಲಂ ವಿಕೆಟ್ಉರುಳಿಸಿ ತಮ್ಮ ಪಾಳಯದಲ್ಲಿ ಮೊದಲ ವಿಕೆಟ್ ನಗು ಚೆಲ್ಲಿದರು. ಆಗ ಕ್ರೀಸ್‍ಗೆ ಬಂದಿದ್ದು ಸುರೇಶ್ ರೈನಾ. ಬ್ರೆಂಡಾನ್ ವಿಕೆಟ್ ಉರುಳಿದ ಕೆಲವೇ ನಿಮಿಷಗಳಲ್ಲಿ ಡೆಲ್ಲಿ ತಂಡದ ಮಧ್ಯಮ ವೇಗಿ ಮಾರ್ಕೆಲ್ ಅವರು ಚೆನ್ನೈನ ಮತ್ತೊಬ್ಬ ಆರಂಭಿಕ ಸ್ಮಿತ್ ವಿಕೆಟ್ ಪಡೆದು, ಧೋನಿ ಪಡೆಗೆ ಮತ್ತೊಂದು ಪೆಟ್ಟುಕೊಟ್ಟರು. ಆಗ, 3ನೇ ವಿಕೆಟ್‍ನ ಜೊತೆಯಾಟಕ್ಕೆ ರೈನಾಗೆ ಜೊತೆಯಾಗಿದ್ದು ಡು ಪ್ಲೆಸಿಸ್. ಸ್ಫೋಟಕ ಬ್ಯಾಟಿಂಗ್‍ಗೆ ಹೆಸರುವಾಸಿಯಾದ ರೈನಾ ಹೆಚ್ಚು ಆಡದೇ ವಿಕೆಟ್ ಒಪ್ಪಿಸಿ ಹೊರನಡೆದು ಚೆನ್ನೈ ಅಭಿಮಾನಿಗಳಿಗೆ ನಿರಾಸೆ ತಂದರು.
ಈ ಹಂತದಲ್ಲಿ, ಜೊತೆಯಾದ ಪ್ಲೆಸಿಸ್ ಹಾಗೂ ನಾಯಕ ಧೋನಿ, 4ನೇ ವಿಕೆಟ್‍ಗೆ 6 ಓವರ್‍ಗಳಲ್ಲಿ 37 ರನ್ ಪೇರಿಸಿದರು. ಚೆನ್ನೈ ಇನಿಂಗ್ಸ್ ನಲ್ಲಿ ಮೂಡಿಬಂದ ಅತಿ ದೊಡ್ಡ
ಜೊತೆಯಾಟ ಇದೇ ! ಬಿರುಸಿನ ಹೊಡೆತಗಳಿಗೆ ಹೆಚ್ಚು ಮುಂದಾಗದೇ ನಿಧಾನವಾಗಿ ರನ್ ಗತಿಯನ್ನು ಹೆಚ್ಚಿಸಲು ಮುಂದಾಗಿದ್ದ ಈ ಜೋಡಿಯನ್ನು ಇನಿಂಗ್ಸ್ ನ 16ನೇ ಓವರ್‍ನಲ್ಲಿ ಮಾರ್ಕೆಲ್ ಬೇರ್ಪಡಿಸಿದರು. ಪ್ಲೆಸಿಸ್ ವಿಕೆಟ್ ಗಳಿಸಿದ ಅವರು, ಚೆನ್ನೈಗೆ ಮತ್ತೊಂದು ಶಾಕ್ ನೀಡಿದರು. ಆನಂತರ ಧೋನಿಗೆ ಜೊತೆಯಾದ ಬ್ರಾವೊ ಕೇವಲ 8 ರನ್ ಕಾಣಿಕೆ ನೀಡಿ 18ನೇ
ಓವರ್‍ನಲ್ಲಿ ಹೊರನಡೆದರು.
ಆನಂತರದ ಓವರ್‍ನಲ್ಲಿ ಧೋನಿ ಸಹ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದರು. ಕೊನೆಯ ಎರಡು ಓವರ್ ಗಳಿಗೆ ಜೊತೆಯಾದ ಪವನ್ ನೇಗಿ ಹಾಗೂ ರವೀಂದ್ರ ಜಡೇಜಾ ಸಹ ಆರ್ಭಟಿಸದಿದ್ದ ಕಾರಣದಿಂದ ಚೆನ್ನೈ 119 ರನ್‍ಗಳ ಸಾಧಾರಣ ಮೊತ್ತಕ್ಕೆ ತೃಪ್ತಿಪಡಬೇಕಾಯಿತು. ತಾಳ್ಮೆಯ ಆಟ: ಚೆನ್ನೈ ನೀಡಿದ ಸುಲಭ ಮೊತ್ತದ ಬೆನ್ನಟ್ಟಿದ ಡೆಲ್ಲಿ, ನಿರಾತಂಕವಾಗಿ ಇನಿಂಗ್ಸ್ ಆರಂಭಿಸಿತಾದರೂ, ತಂಡದ ಮೊತ್ತ 16 ರನ್ ಆಗಿದ್ದಾಗ ಆರಂಭಿಕ ಖಿಂಟಾನ್ ಡಿ ಕಾಕ್ ಅವರನ್ನು ಕಳೆದುಕೊಂಡು ಕೊಂಚ ಗಲಿಬಿಲಿಗೊಂಡಿತು. ಈ ವಿಕೆಟ್ ಪಡೆದಿದ್ದು ಈಶ್ವರ್ ಪಾಂಡೆ. ಈ ಹಂತದಲ್ಲಿ ತಾಳ್ಮೆಯ ಆಟ ಪ್ರದರ್ಶಿಸಿದ, ಮತ್ತೊಬ್ಬ ಆರಂಬಿsಕ ಶ್ರೇಯಸ್ ಅಯ್ಯರ್ ಹಂತ ಹಂತವಾಗಿ ತಂಡವನ್ನು ಗೆಲವಿನತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದರು.
ಕಾಕ್ ಅವರ ನಿರ್ಗಮನದ ನಂತರ ಅವರಿಗೆ ಜೊತೆಯಾಗಿದ್ದು ನಾಯಕ ಡುಮಿನಿ. ಆದರೆ, ವೈಯಕ್ತಿಕವಾಗಿ ಕೇವಲ 6 ರನ್ ಗಳಿಸಿದ ಡುಮಿನಿ, 5ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿ ಹೊರಡೆದರು. ಆಗ, ಕ್ರೀಸ್‍ಗೆ ಬಂದ ಯುವರಾಜ್ ಸಿಂಗ್, ಅಯ್ಯರ್ ಜೊತೆಗೂಡಿ 3ನೇ ವಿಕೆಟ್ ಗೆ 69 ರನ್ ಸೇರಿಸಿದರು. ಈ ಜೊತೆಯಾಟ ಇನಿಂಗ್ಸ್ ಗೆ ಶಕ್ತಿ ತುಂಬಿತು. ಆದರೆ, ಇನಿಂಗ್ಸ್ ನ 14ನೇ ಓವರ್‍ನಲ್ಲಿ ವೈಯಕ್ತಿಕವಾಗಿ 32 ರನ್ ಗಳಿಸಿದ ಯುವಿ, ವಿಕೆಟ್ ಒಪ್ಪಿಸಿ ಹೊರನಡೆದರು.
ಯುವಿ ಹೊರನಡೆದ ಮೇಲೆ ಬಂದ ಅಲ್ಬಿ ಮಾರ್ಕೆಲ್, ಕೇವಲ 8 ರನ್ ಗಳಿಸಿ ಔಟಾದರು. ಆದರೆ, ಅಷ್ಟರಲ್ಲಾಗಲೇ ತಮ್ಮ ಸಮಯೋಚಿತ ಆಟದಿಂದ ತಂಡವನ್ನು ಗೆಲವಿನ ಹೊಸ್ತಿಲ ಬಳಿ ತಂದು ನಿಲ್ಲಿಸಿದ್ದ ಶ್ರೇಯಸ್ ಅಯ್ಯರ್ (70 ರನ್, 49 ಎಸೆತ, 10 ಬೌಂಡರಿ, 1 ಸಿಕ್ಸರ್) ಗೆಲವಿನ ದಡ ಮುಟ್ಟಿಸಿದರು. ಚೆನ್ನೈ ಪರ, ಈಶ್ವರ್ ಪಾಂಡೆ ಹಾಗೂ ಪವನ್ ನೇಗಿ ತಲಾ 2 ವಿಕೆಟ್ ಗಳಿಸಿದರು. ಭಾನುವಾರ ನಡೆದಿದ್ದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿ, ಚೆನ್ನೈಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವೀಂದ್ರ ಜಡೇಜಾ ಈ ಪಂದ್ಯದಲ್ಲಿ ಯಾವ ಜಾದೂ ಮಾಡದೇ ನಿರಾಸೆ ಮೂಡಿಸಿದರು.