ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನ ಪಡೆಯಲು ರಾಷ್ಟ್ರೀಯತೆಯೇನೂ ಪ್ರಮುಖ ಮಾನದಂಡವಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಪ್ರಸ್ತುತ ಭಾರತ ಕ್ರಿಕೆಟ್ ತಂಡ ಕೋಚ್ ಡಂಕನ್ ಫ್ಲೆಚರ್ ಅವರ ಅವಧಿ ಮುಗಿಯುತ್ತಾ ಬಂದಿದ್ದು, ನೂತನ ಕೋಚ್ ಗಾಗಿ ಬಿಸಿಸಿಐ ಹುಡುಕಾಟ ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಮುಂಬೈನಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ಅವರು, ಭಾರತ ಕ್ರಿಕೆಟ್ ತಂಡದ ಆಡಳಿತ ಮಂಡಳಿಯು ರಾಷ್ಟ್ರೀಯತೆಯನ್ನು ಹೊರತುಪಡಿಸಿ, ತಂಡಕ್ಕೆ ಉತ್ತಮ ತರಬೇತುದಾರರನ್ನು ನೇಮಿಸಬೇಕು ಎಂದು ಹೇಳಿದ್ದಾರೆ.
ಭಾರತದಂತಹ ಪ್ರಮುಖ ತಂಡಕ್ಕೆ ಕೋಚ್ ಆಯ್ಕೆ ಮಾಡುವಾಗ ನಾವು ಆ ವ್ಯಕ್ತಿಯ ರಾಷ್ಟ್ರೀಯತೆಯನ್ನು ಮಾನದಂಡವಾಗಿ ಸ್ವೀಕರಿಸುವ ಬದಲು ಆ ವ್ಯಕ್ತಿ ತಂಡಕ್ಕೆ ತರಬೇತಿ ನೀಡಲು ಸೂಕ್ತ ವ್ಯಕ್ತಿಯೇ ಎಂಬುದನ್ನು ನೋಡಬೇಕು. ಆತ ಭಾರತೀಯನೇ ಅಥವಾ ವಿದೇಶಿಗನೇ ಎಂಬುದು ಮುಖ್ಯವಲ್ಲ. ಭಾರತ ತಂಡಕ್ಕೆ ಉತ್ತಮ ತರಬೇತಿ ನೀಡುವ ಮೂಲಕ ತಂಡದ ಯಶಸ್ಸಿಗೆ ಕಾರಣನಾಗಬೇಕು. ಇದೊಂದು ವೃತ್ತಿಪರ ವಿಶ್ವವಾಗಿದ್ದು, ವಿದೇಶಿಗರು ಇಲ್ಲಿಗೆ ಬರುತ್ತಾರೆ. ಇಲ್ಲಿನ ಆಟಗಾರರು ವಿದೇಶಕ್ಕೆ ಹೋಗುವುಗು ಸಾಮಾನ್ಯ ಎಂದು ದ್ರಾವಿಡ್ ಹೇಳಿದರು.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ಆಯೋಜನೆ ಕುರಿತಂತೆ ಮಾತನಾಡಿದ ದ್ರಾವಿಡ್, ಇಂಡೋ-ಪಾಕ್ ಕ್ರಿಕೆಟ್ ಸರಣಿ ಕುರಿತಂತೆ ಪ್ರೇಕ್ಷಕರಲ್ಲಿ ಯಾವಾಗಲೂ ಒಂದು ರೀತಿಯ ಕುತೂಹಲವಿದ್ದೇ ಇರುತ್ತದೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯ ಯಾವಾಗಲೂ ರೋಚಕತೆಯಿಂದ ಕೂಡಿರುತ್ತದೆ. ಪ್ರೇಕ್ಷಕರು ಕೂಡ ಉಭಯ ತಂಡಗಳ ನಡುವಿನ ಸರಣಿಯಲ್ಲಿ ಕ್ರಿಕೆಟ್ ಗಿಂತ ಹೆಚ್ಚಾಗಿ ಬೇರೆನನ್ನೋ ನಿರೀಕ್ಷಿಸುತ್ತಾರೆ. ಹೀಗಾಗಿ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ಯಾವಾಗಲೂ ರೋಚಕತೆಯಿಂದ ಕೂಡಿರುತ್ತದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.