ಮುಂಬೈ: ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ 9 ವರ್ಷದ ವಯಸ್ಸಿನ ಪೋರನೊಬ್ಬ ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಬೇಸಿಗೆ ಕ್ರಿಕೆಟ್ ಪಂದ್ಯಾವಳಿಯ ಪಂದ್ಯವೊಂದರಲ್ಲಿ 9 ರನ್ ನೀಡಿ 9 ವಿಕೆಟ್ ಕಬಳಿಸಿ ಎಲ್ಲರ ಹುಬ್ಬೇರಿಸಿದ್ದಾನೆ.
ಸ್ಥಳೀಯ ತಂಡವಾದ ದಾದರ್ ಯೂನಿಯನ್‍ನ ಆಟಗಾರನಾದ ಈತ ಭಾನುವಾರ ನಡೆದ 14 ವರ್ಷ ವಯಸ್ಸಿನೊಳಗಿನ ಟೂರ್ನಿಯ ಪಂದ್ಯವೊಂದರಲ್ಲಿ ಈ ಸಾಧನೆ ಮಾಡಿದ್ದಾನೆ.
ಆತನ ಹೆಸರು ಮುಶೀರ್ ಖಾನ್. ಮುಂಬೈನ ಕುರ್ಲಾ ನಿವಾಸಿ. ದಾದರ್ ಯೂನಿಯನ್ ತಂಡದ ಪ್ರಮುಖ ಆಟಗಾರ. ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಪಂದ್ಯವೊಂದರಲ್ಲಿ ಮಿಂಚಿರುವ ಈತ ತಂಡ ಮೊದಲು ಬ್ಯಾಟಿಂಗ್ ಮಾಡಿದಾಗ ಉತ್ತಮವಾಗಿ ಆಡಿ 48 ರನ್ ಗಳಿಸಿದ್ದ. ಆನಂತರ ಎದುರಾಳಿ ಇನಿಂಗ್ಸ್ ನಡೆಯುತ್ತಿದ್ದಾಗ, ತನ್ನ ಸ್ಪಿನ್ ಮೋಡಿಯಿಂದ 9 ವಿಕೆಟ್ ಗಳಿಸಿದ್ದಾನೆ. ಈ ಗಳಿಕೆಯಲ್ಲಿ ಒಂದು ಹ್ಯಾಟ್ರಿಕ್ ಸಹ ಸೇರಿದೆ.
ಅಷ್ಟೇ ಅಲ್ಲ, ಟೂರ್ನಿಯ ಮತ್ತೊಂದು ತಂಡ ವಿರಾರ್ ವಿರುದ್ಧ ಪಂದ್ಯದಲ್ಲಿ 12 ವಿಕೆಟ್ ಉರುಳಿಸಿದ್ದಾನೆ. ಈತನ ಈ ಆಲ್ರೌಂಡರ್ ಆಟದಿಂದಾಗಿ, ದಾದರ್ ತಂಡ, ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.