ಪಾರ್ಟ್: ತವರಿನಲ್ಲಿ ಮಾರಕವಾಗಿ ಪರಿಣಮಿಸುವ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಅತ್ಯಂತ ಸಮರ್ಥವಾಗಿ ಎದುರಿಸಿ, ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ನ್ಯೂಜಿಲೆಂಡ್ನ ರಾಸ್ ಟೇಲರ್ (ಅಜೇಯ 235 ರನ್,286 ಎಸೆತ, 24 ಬೌಂಡರಿ, 2 ಸಿಕ್ಸರ್) ತಂಡ ಇನಿಂಗ್ಸ್ ಮುನ್ನಡೆ ಪಡೆಯುವತ್ತ ಸಾಗುವಂತೆ ಮಾಡಿದ್ದಾರೆ.
ವೆಸ್ಟ್ರನ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಆಟದಲ್ಲಿ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್, ಪಂದ್ಯದ ಮೂರನೇ ದಿನದಾಟ ಮುಕ್ತಾಯಕ್ಕೆ 129 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 510 ರನ್ ಸಂಪಾದಿಸಿದ್ದಾರೆ.
ಆಸ್ಟ್ರೇಲಿಯಾದ 559 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ತಂಡ ದ್ವಿತೀಯ ದಿನದಾಟ ಮುಕ್ತಾಯಕ್ಕೆ 2 ವಿಕೆಟ್ ಕಳೆದುಕೊಂಡು 140 ರನ್ ದಾಖಲಿಸಿತ್ತು. ಮೂರನೇ ದಿನ ಆಸೀಸ್ ಬೌಲಿಂಗ್ ದಾಳಿಯನ್ನು ದಂಡಿಸಿದ ಕಿವೀಸ್ ಬ್ಯಾಟ್ಸ್ಮನ್ಗಳು ದಿನದಾಟದಲ್ಲಿ ಒಟ್ಟು 370 ರನ್ ಪೇರಿಸಿದ್ದಾರೆ. ಅರ್ಧಶತಕ (70 ರನ್) ದೊಂದಿಗೆ ದಿನದಾಟ ಮುಂದುವರಿಸಿದ ಕೇನ್ ವಿಲಿಯಮ್ಸನ್(166 ರನ್, 250 ಎಸೆತ, 24 ಬೌಂಡರಿ), ಶತಕ ದಾಖಲಿಸಿದರು. ಇನ್ನು 26 ರನ್ಗಳೊಂದಿಗೆ ಆಟ ಮುಂದುವರಿಸಿದ ರಾಸ್ ಟೇಲರ್ ದಿನದಾಟದಲ್ಲಿ 209 ರನ್ ಪೇರಿಸಿ ಗಮನ ಸೆಳೆದರು. ಉಳಿದಂತೆ ಬ್ರೆಂಡನ್ ಮೆಕಲಂ 27, ವಾಟ್ಲಿಂಗ್ 1, ಕ್ರೇಗ್ ಅಜೇಯ 7 ರನ್ ಗಳಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 559ಕ್ಕೆ 9, ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 129 ಓವರ್ಗಳಲ್ಲಿ 510ಕ್ಕೆ 6 (ರಾಸ್ ಟೇಲರ್ 235, ವಿಲಿಯಮ್ಸನ್ 166, ಸ್ಟಾರ್ಕ್83ಕ್ಕೆ 2)