ಕ್ರೀಡೆ

ಚೀನಾ ಓಪನ್ ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿನಲ್ಲಿ ಎಡವಿದ ಸೈನಾ

Srinivas Rao BV

ಫುಜೌ: ಪ್ರತಿಷ್ಠಿತ ಚೀನಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಭಾರತದ ಅಗ್ರ ಶಟ್ಲರ್ ಸೈನಾ ನೆಹ್ವಾಲ್ ವಿಫಲರಾಗಿದ್ದಾರೆ. ಪ್ರಶಸ್ತಿ ಸುತ್ತಿನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಲಿ ಕ್ಸುರೇಯಿ ವಿರುದ್ಧ ಸೆಣಸಿದ ಸೈನಾ, 21-12, 21-15 ಗೇಮ್ ಗಳ ಅಂತರದಲ್ಲಿ ಸೋಲು ಕಂಡರು.
ಹೈಕ್ಸಿಯಾ ಸ್ಪೋರ್ಟ್ಸ್ ಕ್ಲಬ್‍ನಲ್ಲಿ ನಡೆದ ಪಂದ್ಯದ ಆರಂಭದಿಂದಲೂ ಉತ್ತಮ ಕೌಶಲ್ಯ ತೋರಿದ ಸ್ಥಳೀಯ ಪ್ರತಿಭೆ ಕ್ಸೆರುಯ್, ಸೈನಾ ಅವರಿಗೆ ಹೆಜ್ಜೆಹೆಜ್ಜೆಗೂ ಸವಾಲಾಗಿ ನಿಂತರು. ಆದರೂ, ತಕ್ಕಮಟ್ಟಿಗೆ ಹೋರಾಟದ ಛಾತಿ ತೋರಿದ ಸೈನಾ ನೆಹ್ವಾಲ್, ಎದುರಾಳಿ ವಿರುದ್ಧ ಅಲ್ಲಲ್ಲಿ ಉತ್ತಮ ಆಟ ಪ್ರದರ್ಶಿಸಿದರು. ಆದರೂ, ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತಂದುಕೊಳ್ಳುವಲ್ಲಿ ವಿಫಲರಾದ ಅವರು, ಮೊದಲ ಗೇಮ್ ನಲ್ಲಿ 21-12ರ ಅಂತರದಲ್ಲಿ ಸೋಲೊಪ್ಪಿಕೊಳ್ಳ ಬೇಕಾಯಿತು.
ಇನ್ನು, ದ್ವಿತೀಯ ಗೇಮïನಲ್ಲೂ ಕ್ಸುರೇಯಿ ಅವರದ್ದೇ ಮೇಲುಗೈ ಆಯಿತು. ಏತನ್ಮಧ್ಯೆ, ಇಲ್ಲೂ ಸೈನಾ ನೆಹ್ವಾಲ್ ಅವರು ತೀವ್ರ ಹೋರಾಟ ತೋರಿದರಾದರೂ ಕ್ಸುರೇಯಿ ಅವರನ್ನು ಕಟ್ಟಿಹಾಕಲಾಗಲಿಲ್ಲ. ಅದರಲ್ಲೂ ತಮ್ಮ ಎಂದಿನ ದೌರ್ಬಲ್ಯವನ್ನು ಮತ್ತೆ ಪ್ರದರ್ಶಸಿದ ಸೈನಾ, ಒತ್ತಡದಲ್ಲಿ ಕೆಲವಾರು ತಪ್ಪುಗಳನ್ನೆಸಗಿ ಎದುರಾಳಿಗೆ ಅಂಕಗಳನ್ನು ಬಿಟ್ಟುಕೊಟ್ಟರು. ಹೀಗಾಗಿ, ಈ ಗೇಮ್ ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಕ್ಸುರೇಯಿ ಜಯಶಾಲಿಯಾದರಲ್ಲದೆ, ಪಂದ್ಯದಲ್ಲೂ ವಿಜಯಿಯಾಗಿ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ, ಈವರೆಗಿನ 12 ಮುಖಾಮುಖಿಗಳಲ್ಲಿ ಕ್ಸುರೇಯಿ 10 ಬಾರಿ ಜಯಗಳಿಸಿದ್ದರೆ, ಸೈನಾ ಕೇವಲ 2  ಬಾರಿ ಗೆಲವು ಸಾಧಿಸಿದಂತಾಗಿದೆ.

SCROLL FOR NEXT