ಲಂಡನ್: ಪ್ರತಿಷ್ಠಿತ ಎಟಿಪಿ ವಿಶ್ವ ಟೂರ್ ಫೈನಲ್ಸ್ ಟೂರ್ನಿಯಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಕಣಕ್ಕಿಳಿದಿರುವ ಭಾರತದ ರೋಹನ್ ಬೋಪಣ್ಣ ಮತ್ತು ರೊಮೇನಿಯಾದ ಫ್ಲೋರಿನ್ ಮರ್ಜಿಯಾ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್ ಬ್ರಯಾನ್ ಸಹೋದರರನ್ನು ಮಣಿಸಿದರು.
ಸೋಮವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಮತ್ತು ಮರ್ಜಿಯಾ ಜೋಡಿ ಅಗ್ರಶ್ರೇಯಾಂಕಿತ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯಾನ್ ಸಹೋದರರನ್ನು 6-4, 6-3 ನೇರ ಸೆಟ್‍ಗಳಲ್ಲಿ ಮಣಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಇದೇ ವರ್ಷ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲೂ ಬೋಪಣ್ಣ ಜೋಡಿ ಬ್ರಯಾನ್ ಸಹೋದರರನ್ನು ಮಣಿಸಿದ್ದರು.