ಕೌಲೂನ್(ಹಾಂಕಾಂಗ್): ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬುಧವಾರ ದಿಂದ ಆರಂಭಗೊಳ್ಳಲಿರುವ ಹಾಂಗ್‍ಕಾಂಗ್ ಓಪನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಅವರ ಅನುಪ ಸ್ಥಿತಿಯಲ್ಲಿ, ಪಿ.ವಿ. ಸಿಂಧು, ಕಿಡಾಂಬಿ ಶ್ರೀಕಾಂತ್ ಭಾರತೀಯ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. 25 ವರ್ಷದ ಸೈನಾ ನೆಹ್ವಾಲ್, ಕಳೆದ ವಾರ ಮುಕ್ತಾಯಗೊಂಡ ಚೀನಾ ಓಪನ್ ಸೂಪರ್ ಸೀರಿಸ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಸ್ಥಾನ ಅಲಂಕರಿಸಿದ್ದರು. ಇದೀಗ, ಹಾಂಗ್‍ಕಾಂಗ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಆಟಗಾರರು ಆರಂಭದಲ್ಲೇ ಕೆಲವು ಕ್ಲಿಷ್ಟಕರ ಸವಾಲುಗಳನ್ನು ಎದುರಿಸಬೇಕಿದೆ.
ಸೈನಾ ಬಿಟ್ಟರೆ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತಕ್ಕೆ ಪದಕದ ಸಂಭ್ರಮ ತರಬಹುದಾದ ಪಿ.ವಿ. ಸಿಂಧು, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲೇ ಸ್ಪೇನ್‍ನ ಕೆರೊಲಿನಾ ಮರಿನ್ ವಿರುದ್ಧ ಸೆಣಸಬೇಕಿದೆ. ಈವರೆಗೆ ಈ ಇಬ್ಬರೂ ಐದು ಬಾರಿ ಮುಖಾಮುಖಿಯಾಗಿದ್ದು, ಸಿಂಧು 2 ಬಾರಿ ಗೆದ್ದಿದ್ದರೆ, ಮರಿನ್ 3 ಬಾರಿ ಜಯ ಸಾಧಿಸಿದ್ದಾರೆ. ಇನ್ನು, ಪುರುಷರ ಸಿಂಗಲ್ಸ್‍ನಲ್ಲಿ 6ನೇ ಶ್ರೇಯಾಂಕ ಹೊಂದಿರುವ ಶ್ರೀಕಾಂತ್, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ, ಟೂರ್ನಿಯ 10ನೇ ಶ್ರೇಯಾಂಕಿತ ಆಟಗಾರ, ಚೀನಾದ ಟಿಯಾನ್ ಹೌವೆಯ್ ವಿರುದ್ಧ ಕಾದಾಡಲಿದ್ದಾರೆ.
ಎರಡು ಬಾರಿ ಡಚ್ ಓಪನ್ ಗ್ರಾಂಡ್ ಪ್ರೀ ಪ್ರಶಸ್ತಿ ಗೆದ್ದ ಹಿರಿಮೆ ಗಳಿಸಿರುವ ಅಜಯ್ ಜಯರಾಮ್, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಚೀನಾದ ಚೆನ್ ಲಾಂಗ್ ಅವರನ್ನು ಎದುರಿಸಲಿದ್ದಾರೆ.