ಬೆಂಗಳೂರು: ಪುರುಷರ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಉತ್ತರ ಪ್ರದೇಶ, ರಾಜಸ್ಥಾನ ತಂಡವನ್ನು 15-13 ಅಂಕಗಳ ಅಂತರದಿಂದ ಮಣಿಸಿತು. ಈ ಪಂದ್ಯದಲ್ಲಿ ಇತ್ತಂಡಗಳ ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿತ್ತು.
ಆರಂಭದಲ್ಲಿ, ರಾಜಸ್ಥಾನದ ತಂತ್ರಗಾರಿಕೆಯನ್ನು ಹತ್ತಿಕ್ಕುವ ಮೂಲಕ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸಿತಾದರೂ, ತನ್ನ ರೈಡಿಂಗ್ ವೇಳೆ ಅನಗತ್ಯವಾಗಿ ಅಂಕಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆ ಅನುಭವಿಸಿತು. ಹಾಗಾಗಿ, ಪಂದ್ಯದ ಮೊದಲಾರ್ಧದಲ್ಲಿ ಉತ್ತರ ಪ್ರದೇಶ, ರಾಜಸ್ಥಾನಕ್ಕಿಂತ 2 ಅಂಕಗಳ ಹಿನ್ನಡೆ (3-5) ಗಳಿಸಿತ್ತು. ಆದರೆ, ಪಂದ್ಯದ ದ್ವಿತೀಯಾರ್ಧದಲ್ಲಿ ಉತ್ತರ ಪ್ರದೇಶ ಆಟಗಾರ್ತಿಯ ಆತ್ಮವಿಶ್ವಾಸ ಇಮ್ಮಡಿಗೊಂಡಿತು.
ರಾಜಸ್ಥಾನದ ವಿರುದ್ಧ ಮುಗಿಬಿದ್ದ ಉತ್ತರ ಪ್ರದೇಶದ ಆಟಗಾರರು, ತೀವ್ರ ಹೋರಾಟ ನೀಡುವ ಮೂಲಕ, ಅಂತಿಮವಾಗಿ, 15-13ರ ಅಂತರದಲ್ಲಿ ಜಯ ಸಾಧಿಸಿದರಲ್ಲದೆ, ಪ್ರಶಸ್ತಿಗೂ ಭಾಜನರಾದರು. ಇದಕ್ಕೂ ಮುನ್ನ ನಡೆದಿದ್ದ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ರಾಜಸ್ಥಾನ ತಂಡ, ಸರ್ವೀಸಸ್ ತಂಡವನ್ನು 29-27 ಅಂಕಗಳ ಅಂತರದಿಂದ ಮಣಿಸಿದರೆ, ಉತ್ತರ ಪ್ರದೇಶ ತಂಡ, ಹರ್ಯಾಣವನ್ನು 25-17 ಅಂಕಗಳಿಂದ ಸೋಲಿಸಿತ್ತು.
ಹರ್ಯಾಣ ಸೋಲಿಸಿ ಪ್ರಶಸ್ತಿಗೆ ಭಾಜನವಾದ ರೈಲ್ವೇಸ್ ತಂಡ ಮಹಿಳೆಯರ ವಿಭಾಗದ ಅಂತಿಮ ಪಂದ್ಯದಲ್ಲಿ, ಹರ್ಯಾಣ ವಿರುದ್ಧ ಸೆಣಸಿದ ಭಾರತೀಯ ರೈಲ್ವೇಸ್ ತಂಡ, 18-13 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿತು. ಪಂದ್ಯದ ಆರಂಭದಿಂದಲೂ ಉತ್ತಮವಾಗಿ ಹೋರಾಟ ನೀಡಿದ ಇತ್ತಂಡಗಳೂ, ಪರಸ್ಪರ ಸವಾಲೆಸೆಯುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಕೆರಳಸಿದ್ದವು. ಆದರೂ, ವೀರೋಚಿತ ಹೋರಾಟ ನೀಡಿದ ರೈಲ್ವೇಸ್ ಆಟಗಾರ್ತಿಯರು ಪಂದ್ಯದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವು.
ಭಾರತೀಯ ಮಹಿಳಾ ತಂಡದ ನಾಯಕಿಯೂ ಆದ ರೈಲ್ವೇಸ್ ತಂಡದ ನಾಯಕಿ, ಬೆಂಗಳೂರಿನ ರಾಜೇಶ್ವರಿ ಬಾಯಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು. ಫೈನಲ್ ಪಂದ್ಯಕ್ಕೂ ಮುನ್ನ ನಡೆದಿದ್ದ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ರೈಲ್ವೇಸ್ ತಂಡ, ಹಿಮಾಚಲ ಪ್ರದೇಶವನ್ನು 23-14 ಅಂಕಗಳ ಅಂತರದಲ್ಲಿ ಸೋಲಿಸಿದರೆ, ಹರ್ಯಾಣ ತಂಡ, ಮಹಾರಾಷ್ಟ್ರ ವಿರುದ್ಧ 17-15 ಅಂಕಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos