ಗುವಾಹಟಿ: ಮೊದಲ ಇನ್ನಿಂಗ್ಸ್‍ನಲ್ಲಿನ ಬ್ಯಾಟಿಂಗ್ ವೈಫಲ್ಯವನ್ನು ಸಂಘಟಿತ ಬೌಲಿಂಗ್‍ನೊಂದಿಗೆ ಅತ್ಯದ್ಭುತವಾಗಿ ಸಮರ್ಥಿಸಿಕೊಂಡ ಪ್ರವಾಸಿ ಕರ್ನಾಟಕ, ಎರಡನೇ ಇನ್ನಿಂಗ್ಸ್ ನಲ್ಲಿ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ ಆತಿಥೇಯ ಅಸ್ಸಾಂ ವಿರುದ್ಧ ಗೆಲುವು ಸಾಧಿಸುವತ್ತ ಹೆಜ್ಜೆ ಇಟ್ಟಿದೆ.
ಬರ್ಸಪಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ `ಎ' ಗುಂಪಿನ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾ„ಸಿರುವ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡಕ್ಕೆ ಇನ್ನು ಬೇಕಿರುವುದು 9 ವಿಕೆಟ್‍ಗಳು. ಅತ್ಯಂತ ಸಮರ್ಥನೀಯ ಬೌಲಿಂಗ್ ಪಡೆಯನ್ನು ಹೊಂದಿರುವ ಕರ್ನಾಟಕ ನಿರೀಕ್ಷಿತ ಪ್ರದರ್ಶನವನ್ನೇನಾದರೂ ತೋರಿದರೆ, ಈ ಋತುವಿನ ರಣಜಿ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡುವುದಂತೂ ಖಚಿತವಾಗಲಿದೆ.
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಸೈಯದ್ ಮೊಹಮದ್ ನಡೆಸಿದ ಮಾರಕ ದಾಳಿಯ ನೆರವಿನೊಂದಿಗೆ ಬೀಗಿದ್ದ ಆತಿಥೇಯ ಅಸ್ಸಾಂ, ಎರಡನೇ ಇನ್ನಿಂಗ್ಸ್‍ನಲ್ಲಿ ಕರ್ನಾಟಕದ ಆರಂಭಿಕ ಆರ್. ಸಮರ್ಥ್ (131) ಅವರ ಭರ್ಜರಿ ಶತಕದ ಆಟದೆದುರು ಮಂಕಾಯಿತು. ಮಾತ್ರವಲ್ಲದೆ, ಇದೀಗ ಗೆಲುವಿಗೆ 388 ರನ್‍ಗಳ ಭಾರೀ ಸವಾಲು ಪಡೆದಿರುವ ಅದು, ತನ್ನ ಎರಡನೇ ಇನ್ನಿಂಗ್ಸ್‍ನಲ್ಲಿ 11.1 ಓವರ್‍ಗಳಲ್ಲಿ 1 ವಿಕೆಟ್‍ಗೆ 30 ರನ್ ಗಳಿಸಿ ಇನ್ನೂ 358 ರನ್ ಹಿನ್ನಡೆಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆರಂಭಿಕ ಪಲ್ಲವ್ ದಾಸ್ 21 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ಮತ್ತೋರ್ವ ಆರಂಭಿಕ ಶಿವಶಂಕರ್ ರಾಯ್ 8 ರನ್ ಗಳಿಸಿ ಸುಚಿತ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಆಗಿ ಔಟಾದರು.ಇದೀಗ ಜಯದ ಮೇಲೆ ಕಣ್ಣಿಟ್ಟಿರುವ ಕರ್ನಾಟಕಕ್ಕೆ ಮೊದಲ ಇನ್ನಿಂಗ್ಸ್‍ನಲ್ಲಿ ಕಾಡಿದ್ದ ಅಮಿತ್ ವರ್ಮಾ ಮತ್ತು ಆರಂಭಿಕ ಪಲ್ಲವ್ ದಾಸ್ ವಿಕೆಟ್ ಮಹತ್ವದ್ದಾಗಿದೆ.
ಸಮರ್ಥ್ ಭರ್ಜರಿ ಶತಕ: ಇತ್ತ 77 ರನ್‍ಗಳೊಂದಿಗೆ ಮೂರನೇ ದಿನದಾಟ ಮುಂದುವರೆಸಿದ ಕರ್ನಾಟಕಕ್ಕೆ ಆರ್. ಸಮರ್ಥ್ ದಾಖಲಿಸಿದ ಸೊಗಸಾದ ಇನ್ನಿಂಗ್ಸ್ ಆತಿಥೇಯರ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ನೆರವಾಯಿತು. ಅವರೊಂದಿಗೆ ಮಿಕ್ಕವರೂ ತಮ್ಮ ಕೈಲಾದ ಕಾಣಿಕೆ ನೀಡಲಾಗಿ ಕರ್ನಾಟಕ ತನ್ನ 94 ಓವರ್‍ಗಳಲ್ಲಿ 394 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡು ತನ್ನ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಇನ್ನು 33 ರನ್‍ಗಳೊಂದಿಗೆ ಆಟ ಆರಂಭಿಸಿದ ಸಮರ್ಥ್ ಅಸ್ಸಾಂ ಬೌಲರ್‍ಗಳನ್ನು ಇನ್ನಿಲ್ಲದಂತೆ ಕಾಡಿದರು. 319 ನಿಮಿಷಗಳ ಕಾಲ ಕ್ರೀಸ್‍ನಲ್ಲಿದ್ದ ಅವರು 199 ಎಸೆತಗಳಲ್ಲಿ 12 ಬೌಂಡರಿಗಳುಳ್ಳ ಅತ್ಯುಪಯುಕ್ತ ಶತಕ ಸಿಡಿಸಿದರು. ಆದರೆ 44 ರನ್ ಗಳಿಸಿ ಔಟಾಗದೆ ಉಳಿದಿದ್ದ ಮಯಾಂಕ್ ಅಗರ್ವಾಲ್ ಕೇವಲ 3 ರನ್‍ಗೆ ನಿರುತ್ತರರಾದರು. ಇನ್ನುಳಿದಂತೆ ರಾಬಿನ್ ಉತ್ತಪ್ಪ 18 ರನ್ ಗಳಿಸಿ ಮತ್ತೆ ವೈಫಲ್ಯ ಅನುಭವಿಸಿದರೆ, ಶಿಶಿರ್ ಭವಾನೆ (40), ಕರುಣ್ ನಾಯರ್ (34), ಸಿ.ಎಂ. ಗೌತಮ್ (44) ಮತ್ತು ಶ್ರೇಯಸ್ ಗೋಪಾಲ್ 41 ರನ್ ಗಳಿಸಿ ತಂಡದ ಮೊತ್ತವನ್ನು ಇನ್ನಷ್ಟು ಹಿಗ್ಗಿಸಿದರು. ವಿನಯ್ ಕುಮಾರ್ 1 ರನ್ ಗಳಿಸಿ ಔಟಾದರೆ ಜೆ. ಸುಚಿತ್ ಮತ್ತು ಅಭಿಮನ್ಯು ಮಿಥುನ್ ಕ್ರಮವಾಗಿ 24 ಹಾಗೂ 2 ರನ್ ಗಳಿಸಿ ಆಡುತ್ತಿದ್ದಾಗ ವಿನಯ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಅಸ್ಸಾಂ ಪರ ಸೈಯದ್ ಹಮದ್ 2 ವಿಕೆಟ್ ಪಡೆದರೆ, ಸ್ವರೂಪಂ ಪುರ್ಕಯಾಸ್ತ 78 ಕ್ಕೆ 3 ಮತ್ತು ಅರುಪ್ ದಾಸ್, ಅಮಿತ್ ವರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಸೌರಾಷ್ಟ್ರ ಗೆಲ್ಲಿಸಿದ ಜಡೇಜಾ ರಾಜ್‍ಕೋಟ್: ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಅದ್ಭುತ ಪ್ರದರ್ಶನದಿಂದಾಗಿ ತ್ರಿಪುರಾ ವಿರುದ್ಧದ ರಣಜಿ ಪಂದ್ಯದಲ್ಲಿ ಸೌರಾಷ್ಟ್ರ, ಇನಿಂಗ್ಸ್ ಹಾಗೂ 118 ರನ್ ಗೆಲವು ದಾಖಲಿಸಿತು. ಸೌರಾಷ್ಟ್ರ ಪರ ಮೊದಲ ಇನಿಂಗ್ಸ್‍ನಲ್ಲಿ 91 ರನ್ ಪೇರಿಸಿದ್ದ ರವೀಂದ್ರ, ಬೌಲಿಂಗ್‍ನಲ್ಲಿ ಒಟ್ಟಾರೆಯಾಗಿ 11 ವಿಕೆಟ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ 307; ತ್ರಿಪುರಾ 103 ಹಾಗೂ 86 (_ಫಾಲೋ ಆನ್)