ಬೆಂಗಳೂರು: 2018ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಇರಾನ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದು, ಭಾರತ ತಂಡ ಹೆದರುವುದಿಲ್ಲ. ಉತ್ತಮ ವಿಶ್ವಾಸದೊಂದಿಗೆ ಆಡಲಿದೆ ಎಂದು ಭಾರತ ತಂಡದ ಗೋಲ್‍ಕೀಪರ್ ಸುಬ್ರತಾ ಪಾಲ್ ಅಭಿಪ್ರಾಯಪಟ್ಟಿದ್ದಾರೆ. ಸೆಪ್ಟೆಂಬರ್ 8ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇರಾನ್ ತಂಡಗಳು ಸೆಣಸಲಿದ್ದು, ಭಾರತ ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ಸೋತು ಒತ್ತಡಕ್ಕೆ ಸಿಲುಕಿದೆ.
ಹಾಗಾಗಿ ಈ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುವುದು ಎಂಬ ಕುತೂಹಲ ಮೂಡಿದೆ. ``ನಾವು ಒಂದು ತಂಡವಾಗಿ ಒಗ್ಗಟ್ಟಿನಿಂದ ಆಡಲಿದ್ದೇವೆ. ಫುಟ್ಬಾಲ್ ಕ್ರೀಡೆಯಲ್ಲಿ ತಂಡವಾಗಿ ಪ್ರತಿಸ್ಪರ್ಧಿಗಳ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸುವುದಾಗಿದೆ. ಫುಟ್ಬಾಲ್ ಕ್ರೀಡೆಯಲ್ಲಿ ಏನು ಬೇಕಾದರೂ ನಡೆಯಬಹುದು. ಯಾವುದೇ ತಂಡ ತನ್ನ ಸಾಮರ್ಥ್ಯ ಪ್ರದರ್ಶಿಸಿ ಪ್ರತಿಸ್ಪರ್ಧಿಯನ್ನು ಮಣಿಸಬಲ್ಲದು. ಇರಾನ್ ತಂಡದ ಸಾಮರ್ಥ್ಯವನ್ನು ನಾವು ಅರಿತಿದ್ದೇವೆ. ಆದರೆ ಪಂದ್ಯದ ದಿನದಂದು ಯಾವ ತಂಡ ಮೇಲುಗೈ ಸಾಧಿಸುವುದು ಎಂಬುದಷ್ಟೇ ಗೆಲುವನ್ನು ನಿರ್ಧರಿಸಲಿದೆ. ಪ್ರತಿ ತಂಡ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ.
ಪಂದ್ಯದಲ್ಲಿ ಗೆಲುವು ಸಾಧಿಸಲು ನಾವು ಸಂಪೂರ್ಣ ಪ್ರಯತ್ನ ನಡೆಸುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡುತ್ತೇನೆ'' ಎಂದು ಸುಬ್ರತಾ ಪಾಲ್ ತಿಳಿಸಿದ್ದಾರೆ.