ಕ್ರೀಡೆ

ಕೆಪಿಎಲ್ : ಫೈನಲ್ ಗೆ ಬಿಜಾಪುರ ಬುಲ್ಸ್

Rashmi Kasaragodu
ಮೈಸೂರು:  ಸ್ಪಿನ್ ಮೋಡಿಯನ್ನು ಪ್ರಮುಖ ಅಸ್ತ್ರವಾಗಿಸಿಕೊಂಡು ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ತನ್ನ ಬಲೆಯೊಳಗೆ ಬೀಳಿಸಿಕೊಂಡ ಬಿಜಾಪುರ ಬುಲ್ಸ್, ಪ್ರಸಕ್ತ ಕೆಪಿಎಲ್ ಟೂರ್ನಿಯ ಫೈನಲ್ ಸುತ್ತಿಗೆ ಲಗ್ಗೆ ಹಾಕಿತು. ಶುಕ್ರವಾರ ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿ ಫೈಯರ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡವು ಬೆಳಗಾವಿ ಪ್ಯಾಂಥರ್ಸ್ ವಿರುದ್ಧ  6 ವಿಕೆಟ್‍ಗಳ ಅಂತರದಲ್ಲಿ ಜಯ ಪಡೆಯಿತು. ಟಾಸ್ ಗೆದ್ದ ಬಿಜಾಪುರ ಬುಲ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 118 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬಿಜಾಪುರ ಬುಲ್ಸ್ 16.4 ಓವರ್‍ಗಳಲ್ಲಿ 4 ವಿಕೆಟ್‍ಗೆ 122 ರನ್ ಕಲೆ ಹಾಕಿ ಜಯಭೇರಿ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಿಜಾಪುರ ಬುಲ್ಸ್, ಆರಂಭದಲ್ಲೇ ಮುಗ್ಗರಿಸಿತಾದರೂ ನಂತರ ಚೇತರಿಸಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಆರ್. ಸಮರ್ಥ್ ರನ್ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ರಾಜು ಭಟ್ಕಳ್ (23) ಹಾಗೂ ರಾಬಿನ್ ಉತ್ತಪ್ಪ (50) ತಂಡಕ್ಕೆ 73 ರನ್‍ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ನಂತರ ಬಂದ ಸುನೀಲ್ ರಾಜು (ಅಜೇಯ 19), ಅಖಿಲ್ (13) ಹಾಗೂ ನಿಧೇಶ್ (ಅಜೇಯ 11) ತಂಡವನ್ನು ಜಯದತ್ತ ಮುನ್ನಡೆಸಿದರು. ಪ್ಯಾಂಥರ್ಸ್ ಪರ ಸ್ಟಾಲಿನ್ ಹೂವರ್ 2 ಹಾಗೂ ವಿನಯ್ ತಲಾ 1 ವಿಕೆಟ್ ಪಡೆದರು.
ಸ್ಪಿನ್  ಸುಳಿಯಲ್ಲಿ ಪ್ಯಾಂಥರ್ಸ್ : ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದು ಬೃಹತ್ ಗುರಿ ಪೇರಿಸುವ ಉದ್ದೇಶದೊಂದಿಗೆ ಕಣಕ್ಕಿಳಿದ ಬೆಳಗಾವಿ ಪ್ಯಾಂಥರ್ಸ್ ತಂಡದ ಹಾದಿ ಸುಗಮವಾಗಿರಲಿಲ್ಲ. ಆರಂಭದಲ್ಲಿ ಯುವ ಬೌಲರ್ ವೈಶಾಖ್ ಹಾಗೂ ನಾಯಕ ಅಖಿಲ್ ದಾಳಿಗೆ ಬೆದರಿದ ಬೆಳಗಾವಿ, ನಂತರ ಸ್ಪಿನ್ನರ್‍ಗಳಾದ ಕೆ.ಪಿ. ಅಪ್ಪಣ್ಣ ಮತ್ತು ಕೆ.ಸಿ. ಕಾರ್ಯಪ್ಪ ಸ್ಪಿನ್ ದಾಳಿಗೆ ಸಿಲುಕಿ ನಲುಗಿತು. ಕೆಳ ಕ್ರಮಾಂಕದಲ್ಲಿ ಪ್ರವೀಣ್ ದುಬೇ (19) ಮತ್ತು ಮಾಜಿದ್ (ಅಜೇಯ 18) ಜವಾಬ್ದಾರಿಯುತ ಬ್ಯಾಟಿಂಗ್‍ನಿಂದ ತಂಡ 100ರ ಗಡಿ ದಾಟಲು ನೆರವಾಯಿತು. ಬುಲ್ಸ್ ಪರ ಅಪ್ಪಣ್ಣ ಮತ್ತು ಕಾರ್ಯಪ್ಪ ತಲಾ 3, ವೈಶಾಕ್ ಮತ್ತು ಅಖಿಲ್ ತಲಾ 2 ವಿಕೆಟ್ ಪಡೆದರು.
ಯುನೈಟೆಡ್ ಹೋರಾಟ ಅಂತ್ಯ
 ಶುಕ್ರವಾರ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳಿ ಟೈಗರ್ಸ್ ತಂಡ 9ವಿಕೆಟ್‍ಗಳ ಅಂತರದಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಮಣಿಸಿತು. ಮಾರಕ ಬೌಲಿಂಗ್ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಹುಬ್ಬಳ್ಳಿ ಟೈಗರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದತ್ಧ  ಬಿಗಿ ಹಿಡಿತ ಸಾಧಿಸಿ, ಕರ್ನಾಟಕ ಪ್ರೀಮಿಯರ್ ಲೀಗ್‍ನ ಎರಡನೇ ಕ್ವಾಲಿಫೈಯರ್ ಸುತ್ತಿಗೆ ಪ್ರವೇಶಿಸಿದೆ. ಇತ್ತ ಮಂಗಳೂರುಯುನೈಟೆಡ್ ತಂಡ ಟೂರ್ನಿಯಿಂದ ಹೊರಬಿದ್ದಿತು. ಟಾಸ್ ಗೆದ್ದ ಮಂಗಳೂರು ಯುನೈಟೆಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 20 ಓವರ್ ಗಳಲ್ಲಿ 101 ರನ್‍ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ತಂಡ 14.2 ಓವರ್‍ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 102 ರನ್ ದಾಖಲಿಸಿ ಜಯಶಾಲಿಯಾಯಿತು. ಈಗಹುಬ್ಬಳ್ಳಿ ಟೈಗರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಲಿವೆ.
SCROLL FOR NEXT