ಮೈಸೂರು: ಕಳೆದೆರಡು ವರ್ಷಗಳಿಂದ ದೇಶೀಯ ಕ್ರಿಕೆಟ್‍ನಲ್ಲಿ ತಮ್ಮ ಪ್ರಭುತ್ವ ಸಾಧಿಸಿರುವ ಕರ್ನಾಟಕ ರಣಜಿ ತಂಡ, ತನ್ನ ಗೆಲವಿನ ನಾಗಾಲೋಟ ಮುಂದುವರೆಸಿದ್ದು, ಈ ಬಾರಿ ಬಾಂಗ್ಲಾದೇಶ ಎ ತಂಡವನ್ನು ಮಣಿಸುವ ಮೂಲಕ ಸದ್ಯದಲ್ಲೇ ಶುರುವಾಗಲಿರುವ ರಣಜಿ ಪಂದ್ಯಾವಳಿಗೆ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.
ಗುರುವಾರ ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಮುಕ್ತಾಯವಾದ ಮೂರು ದಿನಗಳ ಪಂದ್ಯದಲ್ಲಿ ಕರ್ನಾಟಕ ತಂಡ ಪ್ರವಾಸಿ ಬಾಂಗ್ಲಾದೇಶ ಎ ತಂಡದ ವಿರುದ್ಧ 4 ವಿಕೆಟ್ ಜಯ ಸಂಪಾದಿಸಿತು. ಗುರುವಾರ 2ನೇ ಇನಿಂಗ್ಸ್ ಮುಂದುವರಿಸಿ ದ ಬಾಂಗ್ಲಾದೇಶ ಎ ತಂಡ 76 ಓವರ್‍ಗಳಲ್ಲಿ 309 ರನ್‍ಗಳಿಗೆ ಆಲೌಟ್ ಆಯಿತು. ಆ ಮೂಲಕ ಕರ್ನಾಟಕ ತಂಡಕ್ಕೆ 180 ರನ್‍ಗಳ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಕರ್ನಾಟಕ 40.5 ಓವರ್‍ಗಳಲ್ಲಿ 6 ವಿಕೆಟ್‍ಗೆ 185 ರನ್ ಪೇರಿಸಿ ಜಯಭೇರಿ ಬಾರಿಸಿತು. ಕೇವಲ ಮೂರು ದಿನದ ಪಂದ್ಯದಲ್ಲಿ ಯುವ ಆಟಗಾರರೊಂದಿಗೆ ಬಾಂಗ್ಲಾದೇಶ ಎತಂಡದ ವಿರುದ್ಧ ಜಯ ಸಾಧಿಸಿದ
ಕರ್ನಾಟಕ ತಂಡ ತನ್ನ ಸಾಮಥ್ರ್ಯ ಋಜುಪಡಿಸಿದೆ.
ನೆರವಾದ ಗೌತಮ್ ಚುರುಕಿನ ಆಟ
ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕಿಳಿದ ರವಿಕುಮಾರ್ ಸಮರ್ಥ್ (1) ಹಾಗೂ ಮೂರನೇ ಕ್ರಮಾಂಕದಲ್ಲಿ ಬಂದ ಹಿರಿಯ ಆಟಗಾರ ರಾಬಿನ್ ಉತ್ತಪ್ಪ (3) ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ಈ ವೇಳೆ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರ್‍ವಾಲ್ (23) ಜತೆಗೂಡಿದ ನಾಯಕ ಸಿ.ಎಂ.ಗೌತಮ್ (49 ರನ್, 35 ಎಸೆತ, 10 ಬೌಂಡರಿ) ತಂಡವನ್ನು ಮೇಲೆತ್ತಿದರು. ಈ ಜೋಡಿ ಮೂರನೇ ವಿಕೆಟ್‍ಗೆ 60 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ಅಭಿಶೇಕ್ ರೆಡ್ಡಿ (36), ಶಿಶಿರ್ ಭವಾನೆ (24), ಶ್ರೇಯಸ್ (ಅಜೇಯ 40) ತಂಡವನ್ನು ಗೆಲುವಿನ ದಡ ಸೇರಿಸಿದರು. ಬಾಂಗ್ಲಾದೇಶ ಪರ ಅಲ್ ಅಮೀನ್ ಹುಸೇನ್ ಹಾಗೂ ಸಕ್ಲೈನ್ ಸಾಜಿಬ್ ತಲಾ 2, ಕಮ್ರುಲ್ ಇಸ್ಲಾಮ್ ಹಾಗೂ ಜುಬೈರ್ ಹುಸೇನ್ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾಗೆ ಕಂಟಕವಾದ ಸುಚಿತ್: ಇದಕ್ಕೂ ಮೊದಲು, ಎರಡನೇ ದಿನದಮೊತ್ತ 3 ವಿಕೆಟ್‍ಗೆ 188 ರನ್‍ಗಳಿಂದ ದಿನದಾಟ ಆರಂಭಿಸಿದ ಬಾಂಗ್ಲಾದೇಶ ಉತ್ತಮ ಮೊತ್ತ ಕಲೆ ಹಾಕುವತ್ತ ಯೋಚಿಸಿತ್ತು. ಆದರೆ, ಸುಚಿತ್ ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿತು. ದಿನದಾಟ ಆರಂಭಿಸಿದ ಲಿಂಟನ್ ದಾಸ್ (38) ಮತ್ತು ಸೌಮ್ಯ ಸರ್ಕಾರ್ (43) ಆರಂಭದಲ್ಲೇ ಕ್ರಮವಾಗಿ ಪ್ರಸಿಧ್ ಮತ್ತು ಶರತ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಸಿರ್ ಹುಸೇನ್ (44) ಹಾಗೂ ಶುವಗಟ ಹೊಮ್ (ಅಜೇಯ 50) ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರಾದರೂ ಸಾಧ್ಯವಾಗಲಿಲ್ಲ. ನಾಸಿರ್ ವಿಕೆಟ್ ಬಿದ್ದ ನಂತರ ಬಂದ ಬ್ಯಾಟ್ಸ್ ಮನ್‍ಗಳ ಪೈಕಿ ಯಾರೊಬ್ಬರೂ ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಕರ್ನಾಟಕದ ಪರ ಬೌಲಿಂಗ್ ನಲ್ಲಿ ಸುಚಿತ್ 6, ಶರತ್ ಹಾಗೂ ಪ್ರಸಿಧ್ ತಲಾ 1, ಉದಿತ್ 2 ವಿಕೆಟ್ ಪಡೆದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 287
ಬಾಂಗ್ಲಾದೇಶ ಎರಡನೇ ಇನಿಂಗ್ಸ್ 76 ಓವರ್ ಗಳಲ್ಲಿ 309
ಶುವಗಟ ಅಜೇಯ 50, ನಾಸಿರ್ 44
ಬೌಲಿಂಗ್ ವಿವರ: ಸುಚಿತ್ 60ಕ್ಕೆ 6, ಉದಿತ್ 78ಕ್ಕೆ2
ಕರ್ನಾಟಕ ಎರಡನೇ
ಇನಿಂಗ್ಸ್ 40.5 ಓವರ್‍ಗಳಲ್ಲಿ
6 ವಿಕೆಟ್‍ಗೆ 185
ಗೌತಮ್ 49
ಶ್ರೇಯಸ್ ಅಜೇಯ 40
ಬೌಲಿಂಗ್ ವಿವರ: ಅಲ್ ಅಮೀನ್ 23ಕ್ಕೆ 2,
ಸಕ್ಲೈನ್ 55ಕ್ಕೆ 2