ಕ್ರೀಡೆ

ಹೀನಾ ಸಿಧು ಕೊರಳಿಗೆ ಸ್ವರ್ಣ

Vishwanath S
ನವದೆಹಲಿ: ಸತತ ನಾಲ್ಕನೇ ದಿನವೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪದಕ ಸಂಪಾದಿಸುವಲ್ಲಿ ಯಶಸ್ವಿಯಾದ ಭಾರತ, ಏಷ್ಯನ್ ಏರ್‍ಗನ್ ಚಾಂಪಿಯನ್‍ಶಿಪ್‍ನಲ್ಲಿ ತನ್ನ ಪ್ರಭುತ್ವ ಮುಂದುವರೆಸಿದೆ. 
ಬುಧವಾರ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಫೈನಲ್‍ನಲ್ಲಿ ಭಾರತದ ಹೀನಾ ಸಿಧು ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರೆ, ಶ್ವೇತಾ ಸಿಂಗ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ತೃಪ್ತರಾದರು. 26 ವರ್ಷದ ಹೀನಾ ಸಿಧು ಪ್ರಶಸ್ತಿ ಸುತ್ತಿನಲ್ಲಿ 197.8 ಅಂಕಗಳನ್ನು ಪೇರಿಸಿದರು. ಹೀನಾಗೆ ತೀವ್ರ ಸ್ಪರ್ಧೆ ನೀಡಿದ ಶ್ವೇತಾ ಸಿಂಗ್ 197.0 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು. ಕೇವಲ 0.8 ಅಂಕಗಳ ಅಂತರದಲ್ಲಿ ಅವರು ಚಿನ್ನದ ಪದಕದಿಂದ ವಂಚಿತರಾದರು. 
ಈ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಸಿಯಾನ್ ಎ ಕಿಮ್ ಕಂಚಿನ ಪದಕ ಪಡೆ ದರು. ಭಾರತದ ಮತ್ತೋರ್ವ ಸ್ಪರ್ಧಿ ಯಶಸ್ವಿನಿ ದೇಸ್ವಾಲ್ 155.3 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದರು. ಇನ್ನು ಹೀನಾ ಸಿಧು, ಯಶಸ್ವಿನಿ ದೇಸ್ವಾಲ್ ಹಾಗೂ ಶ್ವೇತಾ ಸಿಂಗ್ ಅವರಿದ್ದ ಭಾರತ ತಂಡ, ಟೀಂ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿತು. ಈ ಮೂಲಕ ಟೂರ್ನಿಯಲ್ಲಿ ಭಾರತದ ಪದಕದ ಸಂಖ್ಯೆ 6ಕ್ಕೆ ಏರಿದಂತಾಗಿದೆ. 
ಸ್ಪರ್ಧಾವಳಿಯ ಮೊದಲ ದಿನ ಅಭಿನವ್ ಬಿಂದ್ರಾ 10 ಮೀ.ಏರ್ ರೈಫಲ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಎರಡನೇ ದಿನ ಆಯೋನಿಕಾ ಪಾಲ್ 10 ಮೀ.ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದರು. ಮಂಗಳವಾರ ಗುರ್‍ಪ್ರೀತ್ ಸಿಂಗ್ ಮತ್ತು ಜಿತು ರೈ ಪುರುಷರ ಏರ್ ಪಿಸ್ತೂಲ್ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದಿದ್ದರು.
SCROLL FOR NEXT