ಇಂಗ್ಲೆಂಡ್ ನ ಪ್ರತಿಭಾನ್ವಿತ ಕ್ರಿಕೆಟಿಗ ಜೇಮ್ಸ್ ಟೇಲರ್ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರಿಂದ ತಮ್ಮ 26ನೇ ವಯಸ್ಸಿಸ್ಸಿಗೆ ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಪರೀಕ್ಷೆ ವೇಳೆ ಟೇಲರ್ ಎಆರ್‌ವಿಸಿ(ಆರಿತ್ಮೊಜೆನಿಕ್ ರೈಟ್ ವೆಂಟ್ರಿಕ್ಯುಲರ್ ಆರಿತ್ಮಿಯಾ) ಕಾಯಿಲೆಯಿಂದ ಬಳಲುತ್ತಿದ್ದು ಅವರ ಹೃದಯ ಬಹಳ ಗಂಭೀರ ಸ್ಥಿತಿಯಲ್ಲಿದೆ ಎಂದು ವೆಬ್‌ಸೈಟ್ ಒಂದು ವರದಿ ಮಾಡಿದೆ.
ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಖಚಿತಪಡಿಸಿರುವ ಟೇಲರ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಇದು ನನ್ನ ಜೀವನದ ಅತ್ಯಂತ ಕಠಿಣ ವಾರ. ನನ್ನ ಜಗತ್ತೆ ಬುಡಮೇಲಾಗಿದೆ. ಆದರೆ ನಾನಿಲ್ಲೇ ಇದ್ದೇನೆ ಮತ್ತು ಹೋರಾಡುತ್ತಿದ್ದೇನೆ ಎಂದು ನೋವಿನ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ನಿರ್ವಹಣೆ ತೋರಿ ಇಂಗ್ಲೆಂಡ್ ಮಾನ ಉಳಿಸಿದ್ದ ಬಿರುಸಿನ ಬ್ಯಾಟ್ಸ್‌ಮನ್ ಟೇಲರ್ ಹೃದಯ ಕಾಯಿಲೆಯಿಂದಾಗಿಯೇ ನಾಟಿಂಗ್‌ಹ್ಯಾಂಶೈರ್ ಮತ್ತು ಹಾಲಿ ಕೌಂಟಿ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ. 27 ಏಕದಿನ ಪಂದ್ಯಗಳನ್ನಾಡಿರುವ ಟೇಲರ್ 1 ಶತಕ, 7 ಅರ್ಧಶತಕ ಒಳಗೊಂಡಂತೆ 887 ರನ್ ದಾಖಲಿಸಿದರೆ, 7 ಟೆಸ್ಟ್‌ನಲ್ಲಿ 2 ಅರ್ಧಶತಕದೊಂದಿಗೆ 312 ರನ್ ಬಾರಿಸಿದ್ದಾರೆ.