ಕ್ರೀಡೆ

ಭಾರತೀಯ ಮಹಿಳಾ ಹಾಕಿ ಆಟಗಾರರನ್ನು ಅವಮಾನಿಸಿದ ರೈಲ್ವೆ ಇಲಾಖೆ!

Manjula VN

ನವದೆಹಲಿ: ಒಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಿಯೋ ಒಲಿಂಪಿಕ್ಸ್ ನಲ್ಲಿ ಭಾಗಿಯಾದ ಅಥ್ಲೀಟ್ಸ್ ಗಳನ್ನು ಪ್ರಶಂಸಿಸಿ, ಪ್ರೋತ್ಸಾಹಿಸುವ ಮೂಲಕ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಮತ್ತೊಂದೆಡೆ ದೇಶವನ್ನು ಪ್ರತಿನಿಧಿಸುವ ಆಟಗಾರರನ್ನು ಅವಮಾನಿಸುತ್ತಿರುವ ಪ್ರಸಂಗಗಳು ನಡೆಯುತ್ತಿವೆ.

ರಿಯೋ ಒಲಿಂಪಿಕ್ಸ್ 2016ರಲ್ಲಿ ದೇಶದ ಪರವಾಗಿ ಆಟವಾಡಿದ್ದ ಭಾರತೀಯ ಮಹಿಳಾ ಹಾಕಿ ಆಟಗಾರರಿಗೆ ರೈಲ್ವೆ ಇಲಾಖೆ ಅವಮಾನ ಮಾಡಿದೆ.

ಟಿಕೆಟ್ ಸಿಕ್ಕರೂ, ಸೀಟು ಖಾತ್ರಿಯಾಗದ ಹಿನ್ನೆಲೆಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರರು ಬೋಗಿ ಮೇಲೆ ಕುಳಿತು ಪ್ರಯಾಣ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ರಿಯೋ ಒಲಿಂಪಿಕ್ಸ್ ಮುಗಿದ ನಂತರ ಭಾರತೀಯ ಮಹಿಳಾ ಹಾಕಿ ಆಟಗಾರರು ರಾಂಚಿಯಿಂದ ರೂರ್ಕೆಲಾ ಗೆ ಹೋಗುವ ಸಲುವಾಗಿ ಬೊಕಾರೊ-ಅಲೆಪ್ಪಿ ಎಕ್ಸ್ ಪ್ರೆಸ್ ರೈಲನ್ನು ಹತ್ತಿದ್ದರು. ಈ ವೇಳೆ ಟಿಟಿ ಟಿಕೆಟ್ ಗಳನ್ನು ತಪಾಸಣೆ ಮಾಡಿದ್ದಾರೆ. ಟಿಕೆಟ್ ಖಾತ್ರಿಯಾಗದ ಹಿನ್ನೆಲೆಯಲ್ಲಿ ಬೋಗಿ ಮೇಲೆ ಕುಳಿತು ಪ್ರಯಾಣಿಸಿ ಎಂದು ಆಟಗಾರರಿಗೆ ತಿಳಿಸಿದ್ದಾನೆ.

ಇದರಂತೆ ಆಟಗಾರರು ರೈಲಿನ ಬೋಗಿ ಮೇಲೆ ಕುಳಿತು ಪ್ರಯಾಣ ಮಾಡಿದ್ದಾರೆಂದು ತಿಳಿಸಿದೆ. ಬೊಕಾರೊ-ಅಲೆಪ್ಪಿ ಎಕ್ಸ್ ಪ್ರೆಸ್ ರಾಂಚಿಯಿಂದ 4 ಗಂಟೆಗೆ ಹೊರಟಿದ್ದು, ರೂರ್ಕೆಲಾ ಗೆ 6.45ಕ್ಕೆ ತಲುಪಿದೆ.

ಅಧಿಕಾರಿಗಳ ಈ ವರ್ತನೆಗೆ ಪಂಪೋಶ್ ನ ಸಬ್ ಕಲೆಕ್ಟರ್ ಹಿಮಾಂಶು ಶೇಖರ್ ಅವರು ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾ ಆಡಳಿತ ಮಂಡಳಿ ಕೇಂದ್ರ ರೈಲ್ವೆ ಇಲಾಖೆಗೆ ಈ ಬಗ್ಗೆ ಪತ್ರ ಬರೆಯಲಿದೆ. ರಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆಟಗಾರರಿಗೆ ರೈಲ್ವೆ ಇಲಾಖೆ ಅವಮಾನ ಮಾಡಿದೆ. ಆಟಗಾರರೊಂದಿಗೆ ಉತ್ತಮವಾಗಿ ನಡೆದುಕೊಳ್ಳುವುದು ರೈಲ್ವೆ ಅಧಿಕಾರಿಗಳ ಮುಖ್ಯ ಕರ್ತವ್ಯವಾಗಿರುತ್ತದೆ ಎಂದು ಹೇಳಿದ್ದಾರೆ.

SCROLL FOR NEXT