ಯೋಗೇಶ್ವರ್ ದತ್ (ಸಂಗ್ರಹ ಚಿತ್ರ)
ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಕುಸ್ತಿಪಟು ಯೋಗೇಶ್ವರ್ ದತ್ ಅವರಿಗೆ ಮಂಗಳವಾರ ಸಿಹಿ ಸುದ್ದಿಯೊಂದು ಬಂದಿದೆ.
2012ರ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಕುಸ್ತಿಯ 60 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ ದತ್ ಅವರಿಗೆ ಈಗ ಬೆಳ್ಳಿ ಪದಕ ನೀಡಲಾಗುತ್ತಿದೆ.
ಹೌದು. ಇದು ಅಚ್ಚರಿ ಎನಿಸಿದರು ನಿಜ. ಬೆಳ್ಳಿ ಪದಕ ವಿಜೇತ ರಷ್ಯಾದ ಕುಸ್ತಿಪಟು ಬೆಸಿಕ್ ಕುಡ್ಕೋವ್ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದರಿಂದ ಅವರ ಪದಕವನ್ನು ಹಿಂಪಡೆಯಲಾಗಿದ್ದು, ಎರಡನೇ ಸ್ಥಾನದಲ್ಲಿದ್ದ ಯೋಗೇಶ್ವರ್ ದತ್ ಅವರಿಗೆ ಅದನ್ನು ನೀಡುವುದು ಖಚಿತವಾಗಿದೆ.
2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ನಾನು ಪಡೆದ ಕಂಚಿನ ಪದಕಕ್ಕೆ ಬಡ್ತಿ ನೀಡಿ ಬೆಳ್ಳಿ ಪದಕ ನೀಡುತ್ತಿರುವ ವಿಷಯ ಇಂದು ಬೆಳಗ್ಗೆಯಷ್ಟೇ ನನ್ನ ಗಮನಕ್ಕೆ ಬಂದಿದ್ದು, ಈ ಬೆಳ್ಳಿ ಪದಕವನ್ನು ನಾನು ದೇಶದ ಜನತೆಗೆ ಅರ್ಪಿಸುತ್ತೇನೆ ಎಂದು ಯೋಗೇಶ್ವರ್ ದತ್ ಅವರು ಟ್ವೀಟ್ ಮಾಡಿದ್ದಾರೆ.
ನಾಲ್ಕು ಬಾರಿ ವಿಶ್ವ ಚಾಂಪಿಯನ್ ಹಾಗೂ ಎರಡು ಬಾರಿ ಒಲಿಂಪಿಕ್ ನಲ್ಲಿ ಪದಕ ಗೆದ್ದಿದ್ದ ಬೆಸಿಕ್ ಕುಡ್ಕೋವ್ 2013ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯೂ) ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಈ ನೂತನ ಬದಲಾವಣೆಯ ಕುರಿತು ದೃಢಿಕರಿಸಿದೆ.
ಯೋಗೇಶ್ವರ್ ದತ್ ಅವರು ಇತ್ತೀಚಿಗಷ್ಟೇ ಮುಕ್ತಾಯಗೊಂಡ ರಿಯೋ ಒಲಿಂಪಿಕ್ಸ್ ನ 65 ಕೆಜಿ ಫ್ರಿಸ್ಟೈಲ್ ವಿಭಾಗದ ಮೊದಲ ಹಂತದಲ್ಲೇ ಸೋತು ಕೋಟ್ಯಾಂತರ ಅಭಿಮಾನಿಗಳ ಆಸೆ ನಿರಾಸೆಗೊಳಿಸಿದ್ದರು.