ನವದೆಹಲಿ: ತೀವ್ರ ವಿರೋಧದ ನಂತರ ಕಳಂಕಿತ ಸುರೇಶ್ ಕಲ್ಮಾಡಿ ಅವರು ಬುಧವಾರ ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ)ಯ ಅಜೀವ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ.
ನಿನ್ನೆಯಷ್ಟೇ ಐಒಎ ಸುರೇಶ್ ಕಲ್ಮಡಿ ಅವರಿಗೆ ಆಜೀವ ಅಧ್ಯಕ್ಷ ಸ್ಥಾನ ನೀಡಿತ್ತು. ಇಂದು ಈ ಬಗ್ಗೆ ಟಿವಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿರುವ ಕಲ್ಮಡಿ ವಕೀಲ ಹಿತೇಶ್ ಜೈನ್ ಅವರು, ಕಲ್ಮಾಡಿ ಅವರು ಭ್ರಷ್ಟಾಚಾರ ಆರೋಪದಿಂದ ಮುಕ್ತರಾಗುವವರೆಗೆ ಆ ಹುದ್ದೆಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ. ಐಒಎ ಕಲ್ಮಾಡಿ ಅವರನ್ನು ಆಜೀವ ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವ ವಿಚಾರ ಸ್ವತಃ ಅವರಿಗೂ ಗೊತ್ತಿರಲಿಲ್ಲ ಎಂದಿದ್ದಾರೆ.
ನಿನ್ನೆ ಚೆನ್ನೈನಲ್ಲಿ ನಡೆದ ಐಒಎನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಲ್ಮಾಡಿ ಹಾಗೂ ಮತ್ತೊಬ್ಬ ಕಳಂಕಿತ ಮಾಜಿ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲ್ ಅವರನ್ನು ಆಜೀವ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿತ್ತು. ಐಒಎನ ಈ ವಿವಾದಾತ್ಮಕ ನೇಮಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಈ ಸಂಬಂಧ ಕ್ರೀಡಾ ಸಚಿವಾಲಯ ಐಒಎಗೆ ಶೋಕಾಸ್ ನೋಟಿಸ್ ಸಹ ನೀಡಿದೆ.
2010 ರ ಕಾಮನ್ ವೆಲ್ತ್ ಗೇಮ್ಸ್ ನವದೆಹಲಿಯಲ್ಲಿ ನಡೆದಿದ್ದಾಗ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ ಕಾಮನ್ ವೆಲ್ತ್ ಗೇಮ್ಸ್ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅವರು ಕೋಟ್ಯಂತರ ರುಪಾಯಿ ಭ್ರಷ್ಟಾಚಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ಕ್ರೀಡಾ ಸಚಿವ ವಿಜಯ್ ಗೊಯೆಲ್ ರನ್ನು ಕೇಳಿದಾಗ ನನಗೆ ಇದು ಗೊತ್ತಿರಲಿಲ್ಲ. ಶೀಘ್ರದಲ್ಲೇ ಈ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದರು. ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಭಾರತ ಹಾಕಿ ತಂಡದ ಮಾಜಿ ನಾಯಕ ‘ಕ್ರೀಡಾ ಒಕ್ಕೂಟಗಳಿಗೆ ಕ್ರೀಡಾಳುಗಳನ್ನೇ ಆಯ್ಕೆ ಮಾಡದ ಹೊರತು ಇಂತಹ ಪ್ರಮಾದಗಳು ನಡೆಯುತ್ತಲೇ ಇರುತ್ತವೆ’ ಎಂದು ಪ್ರತಿಕ್ರಿಯಿಸಿದ್ದರು.