ಗುವಾಹಟಿ: ಗುವಾಹತಿಯಲ್ಲಿ ನಡೆಯುತ್ತಿರುವ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಶೂಟರ್‍ಗಳು ಅಮೋಘ ಪ್ರದರ್ಶನ ನೀಡುವ ನಿರೀಕ್ಷೆಯಿದ್ದು, ಇಂದು ಪುರುಷರ 50 ಮೀಟರ್ ಫ್ರೀ ರೈಫಲ್ಸ್ ಸ್ಪರ್ಧೆ ನಡೆಯಲಿದೆ.
ನಿನ್ನೆ ನಡೆದ ಮಹಿಳೆಯರ 50 ಮೀಟರ್ ರೈಫಲ್ಸ್ ಹಾಗೂ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಮತ್ತು ತಂಡ ಸ್ಪರ್ಧೆಯಲ್ಲಿ ಭಾರತದ ಶೂಟರ್‍ಗಳು 6 ಚಿನ್ನ, 2 ರಜತ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.
ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ವಿರುದ್ಧ 0-1 ಅಂತರದಲ್ಲಿ ಸೋಲನುಭವಿಸಿದೆ. ಶೂಟಿಂಗ್ ಜತೆಗೆ ಇಂದು ಭಾರತದ ಆಟಗಾರರು ಕಬ್ಬಡಿ ಸೆಮಿಫೈನಲ್ಸ್, ಬಾಕ್ಸಿಂಗ್, ಟೆಕ್ವಾಂಡೋ ಮತ್ತು ಹ್ಯಾಂಡ್ ಬಾಲ್ ಕ್ರೀಡೆಗಳಲ್ಲಿ ತಮ್ಮ ಪ್ರದರ್ಶನ ತೋರಲಿದ್ದಾರೆ. ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ ಇದುವರೆಗೆ ಒಟ್ಟು 156 ಸ್ವರ್ಣ, 85 ರಜತ ಮತ್ತು 27 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. 2ನೇ ಸ್ಥಾನದಲ್ಲಿರುವ ಶ್ರೀಲಂಕಾ 25 ಚಿನ್ನ, 55 ರಜತ ಮತ್ತು 83 ಕಂಚಿನ ಪದಕಗಳನ್ನು ಗೆದ್ದಿದೆ. 3ನೇ ಸ್ಥಾನಕ್ಕೆ ಸರಿದಿರುವ ಪಾಕಿಸ್ತಾನ 9 ಚಿನ್ನ, 27 ಬೆಳ್ಳಿ ಮತ್ತು 45 ಕಂಚಿನ ಪದಕಗಳನ್ನು ಪಡೆದಿದೆ.