ಮಾರ್ಟಿನಾ ಹಿಂಗಿಸ್ - ಸಾನಿಯಾ ಮಿರ್ಜಾ
ಸೆಂಟ್ಪೀಟರ್ಸ್ಬರ್ಗ್(ರಷ್ಯಾ): ಶನಿವಾರವಷ್ಟೇ ಸೆಂಟ್ ಪೀಟರ್ಸ್ ಬರ್ಗ್ ಲೇಡೀಸ್ ಟ್ರೋಫಿ ಟೂರ್ನಿಯಲ್ಲಿ ಫೈನಲ್ ತಲುಪಿ ಜಯದ ಅಭಿಯಾನವನ್ನು 39ಕ್ಕೆ ವಿಸ್ತರಿಸಿದ್ದ ಅಗ್ರ ಶ್ರೇಯಾಂಕಿತ ಮಹಿಳಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಯ ಗಳಿಸಿ ಚಾಂಪಿಯನ್ ಆಗಿದೆ.
ಇದು ಸಾನಿಯಾ-ಹಿಂಗಿಸ್ ಜೋಡಿ ಸತತ 40ನೇ ಗೆಲುವಾಗಿದ್ದು, ಪ್ರಸಕ್ತ ವರ್ಷ ಅಜೇಯವಾಗಿ ಮುನ್ನಡೆದಿರುವ ‘ಸಾನ್ಟಿನಾ’ ಖ್ಯಾತಿಯ ಜೋಡಿಗೆ ಸತತ 9ನೇ ಹಾಗೂ ಒಟ್ಟಾರೆ 13ನೇ ಪ್ರಶಸ್ತಿ ಇದಾಗಿದೆ.
ರಷ್ಯಾದ ವೇರಾ ಡುಶೆವಿನಾ ಹಾಗೂ ಜೆಕ್ ಗಣರಾಜ್ಯದ ಬಾರ್ಬರಾ ಕ್ರಾಜಿಕೋವಾ ಜೋಡಿಯನ್ನು 6-3, 6-1 ನೇರಸೆಟ್ಗಳಿಂದ 56 ನಿಮಿಷಗಳ ಹೋರಾಟದಲ್ಲಿ ಪರಾಭವಗೊಳಿಸಿತು. ಆ ಮೂಲಕ 27.26 ಲಕ್ಷ ರೂ. ನಗದು ಬಹುಮಾನ ಹಾಗೂ ಟ್ರೋಫಿ ಜಯಿಸಿತು. ಕಳೆದ ವರ್ಷದ ಆಗಸ್ಟ್ ನಿಂದ ಸೋಲನ್ನೇ ಕಾಣದಿರುವ ಸಾನ್ಟಿನಾ, ಈ ವರ್ಷ ಆಡಿರುವ 18 ಪಂದ್ಯ ಹಾಗೂ 4 ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಅಜೇಯವಾಗುಳಿದಿದೆ.
ದಾಖಲೆಯಿಂದ 4 ಹೆಜ್ಜೆ ದೂರ: 1990ರಲ್ಲಿ ಸತತ 44 ಗೆಲುವು ಸಾಧಿಸಿದ್ದ ಜೆಕ್ನ ಜಾನಾ ನೊವೊಟ್ನಾ-ಹೆಲೆನಾ ಸುಕೊವಾ ಜೋಡಿಯ ದಾಖಲೆ ಸರಿಗಟ್ಟಲು ಸಾನಿಯಾ-ಹಿಂಗಿಸ್ ಸದ್ಯ ಕೇವಲ 4 ಗೆಲುವುಗಳಿಂದ ದೂರವಿದ್ದಾರೆ. ಆದರೆ ವಿಶ್ವದಾಖಲೆಗಾಗಿ ಅವರು ಇದರ ದುಪ್ಪಟ್ಟಿಗಿಂತಲೂ ಅಧಿಕ ದೂರ ಕ್ರಮಿಸಬೇಕಾಗಿದೆ. ನವ್ರಾಟಿ ಲೋವಾ-ಪಾಮ್ ಶ್ರಿವರ್ 1983ರಿಂದ 85ರ ನಡುವೆ ಸತತ 109 ಪಂದ್ಯ ಗೆದ್ದಿರುವುದು ವಿಶ್ವದಾಖಲೆಯಾಗಿದೆ.