ನವದೆಹಲಿ: ಫುಟ್ ಬಾಲ್ ಪಂದ್ಯದ ವೇಳೆ ರೆಡ್ ಕಾರ್ಡ್ ನೀಡಿದ ರೆಫರಿ ವಿರುದ್ಧ ಕ್ರೋಧಗೊಂಡ ಆಟಗಾರನೊಬ್ಬ ಆತನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ.
48 ವರ್ಷದ ಫುಟ್ ಬಾಲ್ ರೆಫರಿ ಸೀಸರ್ ಫ್ಲೋರ್ಸ್ ಹತ್ಯೆಗೀಡಾಗಿದ್ದು, ಘಟನೆಯಲ್ಲಿ ಮತ್ತೋರ್ವ ಆಟಗಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಅರ್ಜೆಂಟೀನಾದ ಕೋರ್ಡೋಬಾ ಪ್ರಾಂತ್ಯದಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯದ ವೇಳೆ ಈ ದುರ್ಘಟನೆ ಜರುಗಿದೆ.
ಘಟನೆ ವಿವರ:
ಅರ್ಜೆಂಟೀನಾದ ಕೋರ್ಡೋಬಾ ಪ್ರಾಂತ್ಯದಲ್ಲಿ ಸ್ಥಳೀಯ ಫುಟ್‌ಬಾಲ್ ಪಂದ್ಯವೊಂದು ನಡೆಯುತ್ತಿತ್ತು, ಪಂದ್ಯಕ್ಕೆ ಸೀಸರ್ ಫ್ಲೋರ್ಸ್ ರೆಫರಿಯಾಗಿದ್ದರು. ಈ ವೇಳೆ ಅಟಗಾರನೊಬ್ಬ ಪಂದ್ಯದ ನಿಯಮಾವಳಿಯನ್ನು ಮೀರಿದ ಪರಿಣಾಮ ಸೀಸರ್ ಆತನಿಗೆ ರೆಡ್ ಕಾರ್ಡ್ ತೋರಿಸಿ ಹೊರಗೆ ಕಳುಹಿಸಿದರು. ರೆಫ್ರಿ ಆಟಗಾರನಿಗೆ ರೆಡ್ ಕಾರ್ಡ್ ನೀಡಿ ಹೊರಕಳಿಸಿದಾಗ, ಡ್ರೆಸಿಂಗ್ ರೂಮ್‌ಗೆ ಬಂದ ಆಟಗಾರ ತನ್ನ ಬ್ಯಾಗ್‌ನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಮೈದಾನಕ್ಕೆ ಮರಳಿದ್ದಲ್ಲದೆ, ರೆಫ್ರಿ ಮೇಲೆ 3 ಸುತ್ತು ಗುಂಡು ಹಾರಿಸಿದ್ದಾನೆ.
ರೆಫ್ರಿಯ ತಲೆ, ಎದೆ ಹಾಗೂ ಕುತ್ತಿಗೆಗೆ ಗುಂಡು ತಗುಲಿದ್ದರಿಂದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಈ ವೇಳೆ ಗುಂಡುಹಾರಿಸುತ್ತಿದ್ದ ಆಟಗಾರನನ್ನು ತಡೆಯಲು ಬಂದ ಮತ್ತೋರ್ವ ಆಟಗಾರ ವಾಲ್ಟರ್ ಝರೇಟ್ (25 ವರ್ಷ) ಗೂ ಸಣ್ಣ-ಪುಟ್ಟು ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಬಳಿಕ ಗುಂಡು ಹಾರಿಸಿದ ಆಟಗಾರ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕೋರ್ಡೋಬಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.