ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ಟ್ರಂಪ್ ಪಂದ್ಯದಲ್ಲಿ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ ನಲ್ಲಿ 10ನೇ ಸ್ಥಾನದಲ್ಲಿರುವ ಕಿಡಾಂಬಿ ಶ್ರೀಕಾಂತ್ ಸೋಲು ಕಾಣುವ ಮೂಲಕ ಶುಕ್ರವಾರ ರಾತ್ರಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯದಲ್ಲಿ ಡೆಲ್ಲಿ ಏಸರ್ಸ್ ವಿರುದ್ಧ ಬೆಂಗಳೂರು ಟಾಪ್ ಗನ್ಸ್ ತಂಡ 1-4 ಅಂತರದಲ್ಲಿ ಸೋಲು ಕಂಡಿತು.
ಇಲ್ಲಿನ ಸಿರಿ ಪೋರ್ಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೂಲದ ರಾಜೀವ್ ಔಸೆಫ್ ವಿರುದ್ಧ ಸೆಣಸಿದ ಶ್ರೀಕಾಂತ್, 15-4, 11-15, 9-15 ಗೇಮ್ ಗಳ ಅಂತರದಲ್ಲಿ ಸೋಲು ಕಂಡರು.
ಡೆಲ್ಲಿ ಶುಭಾರಂಭ: ಕೊರಿಯನ್ ಓಪನ್ ಸೂಪರ್ ಸಿರೀಸ್ ನ ರನ್ನರ್ ಅಪ್ ಪ್ರಶಸ್ತಿ ವಿಜೇತ ಅಜಯ್ ಜಯರಾಮ್, ಡೆಲ್ಲಿ ಏಸರ್ಸ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಇತ್ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ, ಟಾಟಾ ಓಪನ್ ಪ್ರಶಸ್ತಿ ವಿಜೇತ ಸಮೀರ್ ವರ್ಮಾ ವಿರುದ್ಧ 15-10, 15-12 ಗೇಮ್ ಗಳ ಜಯ ಸಂಪಾದಿಸುವ ಮೂಲಕ ತಮ್ಮ ತಂಡಕ್ಕೆ 1-0 ಮುನ್ನಡೆ ಗಳಿಸಿಕೊಟ್ಟರು.