ಮೈಸೂರು: ತೀವ್ರ ನಿರೀಕ್ಷೆಗಳ ಹೊರತಾಗಿಯೂ ರಾಜ್ಯ ವನಿತೆಯರ ಬಾಸ್ಕೆಟ್ ಬಾಲ್ ತಂಡ, 66ನೇ ರಾಷ್ಟ್ರೀಯ ಹಿರಿಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಮತ್ತೊಂದು ಸೋಲು ದಾಖಲಿಸಿದೆ. ಶನಿವಾರ ನಡೆದ ತನ್ನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮಣಿಸಿದ್ದ ರಾಜ್ಯ ವನಿತೆಯರು, ಭಾನುವಾರ ನಡೆದ ತಮ್ಮ ಎರಡನೇ ಸೆಣಸಾಟದಲ್ಲಿ ದೆಹಲಿ ವಿರುದ್ಧ 38-32 ಸೆಟ್ ಗಳ ಅಂತರದಲ್ಲಿ ಪರಾಭವ ಹೊಂದಿದರು. ಆದರೆ, ದೆಹಲಿ ವಿರುದ್ಧ ಸೆಣಸಾಟದಲ್ಲಿ ರಾಜ್ಯದ ವನಿತೆಯರು ಪಂಜಾಬ್ ವಿರುದ್ಧ ತೋರಿದ ದಿಟ್ಟತನದ ಹೋರಾಟವನ್ನು ತೋರಲಿಲ್ಲ. ಆದರೂ, ತಕ್ಕ ಮಟ್ಟಿಗಿನ ಪೈಪೋಟಿಯನ್ನು ಪ್ರದರ್ಶಿಸಿದ ರಾಜ್ಯ ತಂಡಕ್ಕೆ ದೆಹಲಿ ತಂಡದ ವನಿತೆಯರು ಪ್ರತಿ ಹಂತದಲ್ಲೂ ಸವಾಲಾಗಿ
ಪರಿಣಮಿಸಿದರು.
ಉತ್ತಮ ಹೊಂದಾಣಿಕೆ, ಸಮನ್ವಯತೆಯೊಂದಿಗೆ ಮಿಂಚಿನ ಪ್ರದರ್ಶನ ನೀಡಿದ ದೆಹಲಿ ವನಿತೆಯರು ಪಂದ್ಯದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಬಿಂಬಿತವಾಗಿರುವ ತಮಿಳುನಾಡು ತಂಡ 66 ನೇ ರಾಷ್ಟ್ರೀಯ ಹಿರಿಯರ ಬಾಸ್ಕೆಟ್ ಬಾಲ್ ರಾಷ್ಟ್ರೀಯ ಹಿರಿಯರ ಬಾಸ್ಕೆಟ್‍ಬಾಲ್ ಚಾಂಪಿಯನ್ ಶಿಪ್‍ನಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ಪ್ರಬಲ ಸರ್ವೀಸಸ್ ತಂಡವನ್ನು 61-40 ಸೆಟ್ ಗಳಿಂದ ಮಣಿಸಿತು.
ಮತ್ತೊಂದು ಪಂದ್ಯದಲ್ಲಿ ಕೇರಳ ಪುರುಷರ ತಂಡ ತೆಲಂಗಾಣ ವಿರುದ್ಧ 81-58 ಅಂತರದಿಂದ ಮಣಿಸಿತು. ಪುರುಷರ ವಿಭಾಗದ ಎರಡನೇ ಹಂತದ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಉತ್ತರ ಪ್ರದೇಶ ವಿರುದ್ಧ 88 -80 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಮತ್ತೊಂದು ಪಂದ್ಯದಲ್ಲಿ ಛತ್ತೀಸ್ ಗಢ ತಂಡ ಒಡಿಶಾ ವಿರುದ್ಧ 72-26 ಅಂಕಗಳಿಂದ, ರಾಜಸ್ಥಾನ ತಂಡ 84-60 ಅಂಕಗಳ ಅಂತರದಲ್ಲಿ ಮಧ್ಯಪ್ರದೇಶ ತಂಡವನ್ನು ಮಣಿಸಿತು.