ನವದೆಹಲಿ: ಈ ವರ್ಷ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ ಆಯೋಜಿಸುವ ಯಾವುದೇ ಉದ್ದೇಶ ಇಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
'ಪಾಕಿಸ್ತಾನ ಜೊತೆ ಯಾವುದೇ ಸರಣಿ ನಡೆಸುವ ಉದ್ದೇಶ ಇಲ್ಲ. ಬಹು ರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಭಾರತ ಪಾಕ್ ವಿರುದ್ಧ ಸೆಣಸಲಿದೆ' ಎಂದು ಠಾಕೂರ್ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ-ಪಾಕ್ ಪಂದ್ಯ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಇದಕ್ಕೆ ಉಭಯ ದೇಶಗಳ ಸರ್ಕಾರ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಪಂದ್ಯ ಆಯೋಜಿಸುವ ನಿರ್ಧಾರ ಕೈಬಿಡಲಾಗಿತ್ತು.
ಇದೇ ವೇಳೆ ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಬಗ್ಗೆ ಪ್ರತಿಕ್ರಿಸಿದ ಠಾಕೂರ್, ಆರಂಭಿಕ ಪಂದ್ಯದಲ್ಲಿ ಸೋತಿರುವುದು ದುರದೃಷ್ಟಕರ ಎಂದಿದ್ದಾರೆ.