ಕ್ರೀಡೆ

ಅಶ್ವಿನ್ ಕೈಜಾರಿದ ನಂಬರ್ ಒನ್ ಪಟ್ಟ

Srinivasamurthy VN

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್, ನೂತನ ಐಸಿಸಿ ಟೆಸ್ಟ್ ಬೌಲರ್‍ಗಳ ರ್ಯಾಂಕಿಂಗ್‍ನಲ್ಲಿ ಅಗ್ರ  ಸ್ಥಾನ ಪಡೆದಿದ್ದಾರೆ.

ಆ ಮೂಲಕ ಭಾರತದ ಆರ್.ಅಶ್ವಿನ್ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ. ಶನಿವಾರ ಮುಕ್ತಾಯವಾದ ಮೂರನೇ ಪಂದ್ಯದಲ್ಲಿ ಬ್ರಾಡ್, ಎರಡನೇ ಇನಿಂಗ್ಸ್‍ನಲ್ಲಿ 17 ರನ್‍ಗೆ 6 ವಿಕೆಟ್ ಪಡೆದು  ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಈ ಸರಣಿ ಗೂ ಮುನ್ನ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಬ್ರಾಡ್ (853), ಈಗ 880 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. 872 ಅಂಕ  ಪಡೆದಿರುವ ಅಶ್ವಿನ್ ದ್ವಿತೀಯ ಸ್ಥಾನದಲ್ಲಿ ಮತ್ತು ಡೇಲ್ ಸ್ಟೇಯ್ನ್  850 ಅಂಕಗಳೊಂದಿಗೆ ತೃತೀಯ  ಸ್ಥಾನದಲ್ಲಿದ್ದಾರೆ. ಭಾರತದ ಮತ್ತೊಬ್ಬ ಸ್ಪಿನ್ನರ್ ಜಡೇಜಾ 789 ಅಂಕಗಳೊಂದಿಗೆ 6ನೇ  ಸ್ಥಾನದಲ್ಲಿ ದ್ದಾರೆ. ಆ ಮೂಲಕ 2004ರಲ್ಲಿ ಸ್ಟೀವ್ ಹರ್ಮಿಸನ್ ನಂತರ ಈ ಸ್ಥಾನ ಅಲಂಕರಿಸಿದ ಆಂಗ್ಲ ಬೌಲರ್ ಆಗಿದ್ದಾರೆ.

ಆಲ್ರೌಂಡರ್‍ಗಳ ಪಟ್ಟಿಯಲ್ಲಿ ಆರ್.ಅಶ್ವಿನ್ ಸ್ಥಾನ ಗಟ್ಟಿಯಾಗಿದ್ದು, ನಂತರದ ಸ್ಥಾನಗಳಲ್ಲಿ ಬಾಂಗ್ಲಾದ ಶಕೀಬ್ ಅಲ್ ಹಸನ್ ಇದ್ದಾರೆ. ಇನ್ನು ಬ್ರಾಡ್ ಈ ಪಟ್ಟಿಯಲ್ಲೂ ಬಡ್ತಿ ಪಡೆದಿದ್ದು, ಮೂರನೇ  ಸ್ಥಾನದ ಲ್ಲಿದ್ದಾರೆ. ಬ್ಯಾಟ್ಸ್‍ಮನ್‍ಗಳ ಪೈಕಿ ಇಂಗ್ಲೆಂಡ್‍ನ ಜೋ ರೂಟ್ ಎರಡು ಸ್ಥಾನಗಳ ಬಡ್ತಿ ಪಡೆದು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಬ್ಯಾಟ್ಸ್‍ಮನ್‍ಗಳನ್ನು ಪರಿಗಣಿಸುವುದಾದರೆ, ಅಜಿಂಕ್ಯ ರಹಾನೆ 10ನೇ ಸ್ಥಾನಕ್ಕೇರುವ ಮೂಲಕ ಬಹಳ ದಿನಗಳ ನಂತರ ಭಾರತದ ಬ್ಯಾಟ್ಸಮನ್ ಈ  ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

SCROLL FOR NEXT