ಅಡಿಲೇಡ್: ಐದು ಏಕದಿನ ಪಂದ್ಯ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿ ಸರಣಿಯನ್ನು ಕಳೆದುಕೊಂಡ ಪ್ರವಾಸಿ ಭಾರತ ತಂಡ ಇದೀಗ ಮಂಗಳವಾರದಿಂದ ಆರಂಭವಾಗಲಿರುವ ಮೂರು ಟಿ 20 ಪಂದ್ಯ ಸರಣಿಯನ್ನು ಗೆದ್ದು ಅದರೊಂದಿಗೆ ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸಕ್ಕೆ ಗೌರವಯುತ ವಿದಾಯ ಹೇಳಲು ಸಂಕಲ್ಪ ತೊಟ್ಟಿದೆ.
ಎಲ್ಲಕ್ಕಿಂತ ಮಿಗಿಲಾಗಿ ಭಾರತದಲ್ಲಿ ಶುರುವಾಗಲಿರುವ ಐಸಿಸಿ ವಿಶ್ವ ಟಿ 20 ಟೂರ್ನಿಗೆ ಇದನ್ನು ಇತ್ತಂಡಗಳೂ ಮುನ್ನುಡಿಯಾಗಿ ಪರಿಗಣಿಸಿದೆ. ಆದರೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅನುಭವಿಸಿದ ಸೋಲಿನಿಂದ ಕೆರಳಿ ಕೆಂಡದಂತಾಗಿರುವ ಆತಿಥೇಯ ಆಸ್ಟ್ರೇಲಿಯಾಗೆ ಮತ್ತೆ ಗೆಲುವಿನ ಹಳಿಗೆ ಮರಳುವ ತವಕ ಶುರುವಾಗಿದೆ. ಮನೀಶ್ ಪಾಂಡೆಯ ಅವಿಸ್ಮರಣೀಯ ಇನ್ನಿಂಗ್ಸ್ ನ ನೆರವಿನೊಂದಿಗೆ 5 ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಭಾರತ, ಆಸ್ಟ್ರೇಲಿಯಾದ ಕ್ಲೀನ್ ಸ್ವೀಪ್ ಆಸೆಯನ್ನು ಹೊಸಕಿಹಾಕಿತ್ತು. ಮಾತ್ರವಲ್ಲದೇ ಈ ಸೋಲು ಆತಿಥೇಯರು ತವರಿನಲ್ಲಿ ಕಾಯ್ದುಕೊಂಡುಬಂದಿದ್ದ ಸತತ 18 ಪಂದ್ಯಗಳ ಜೈತ್ರಯಾತ್ರೆಗೆ ತಡೆಯೊಡ್ಡಿತ್ತು.
ಯುವಿಗೆ ಸ್ಥಾನ?: ಸಾಕಷ್ಟು ಬಿಡುವಿನ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಯುವರಾಜ್ ಸಿಂಗ್ ಅಂತಿಮ ಇಲೆವೆನ್ ನಲ್ಲಿ ಸ್ಥಾನ ಗಿಟ್ಟಿಸುತ್ತಾರೋ ಇಲ್ಲವೋ ಎಂಬ ಕೌತುಕ ಶುರುವಾಗಿದೆ.