ನವದೆಹಲಿ: ವಿಶ್ವದ ನಂ.1 ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದು, ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸತತ ಮೂರನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.
ಶುಕ್ರವಾರ ಮೆಲ್ಬೋರ್ನ್ ನಲ್ಲಿ ನಡೆದ ಫೈನಲ್ಸ್ನಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ- ಹಿಂಗಿಸ್ ಜೋಡಿ ಸತತ 36ನೇ ಗೆಲುವು ದಾಖಲಿಸಿದೆ. ಜೆಕ್ ರಿಪಬ್ಲಿಕ್ನ 7ನೇ ಶ್ರೇಯಾಂಕದ ಲೂಸಿಯಾ ಹ್ರಡೇಕಾ ಮತ್ತು ಆಂಡ್ರಿಯಾ ಹ್ಲಾವಕೊವ ಜೋಡಿಯನ್ನು 7-6, 6-3 ನೇರ ಸೆಟ್ಗಳ ಅಂತರದಿಂದ ಸೋಲಿಸಿದ್ದಾರೆ.
ಮೊದಲ ಸೆಟ್ನಲ್ಲಿ ಪ್ರಬಲ ಪೈಪೋಟಿ ಎದುರಿಸಿದ ಸಾನಿಯಾ-ಹಿಂಗಿಸ್ ಜೋಡಿ ಎರಡನೇ ಸೆಟ್ಅನ್ನು ಸುಲಭವಾಗಿ ಗೆಲ್ಲುವ ಮೂಲಕ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸತತ 3ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿದರು. ಕಳೆದ ವರ್ಷ ವಿಂಬಲ್ಡನ್ ಮತ್ತು ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದರು.