ವಾಷಿಂಗ್ಟನ್: ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿಯವರ ಸಾರ್ವಜನಿಕ ಅಂತ್ಯಸಂಸ್ಕಾರ ಮತ್ತು ಸ್ಮರಣೆ ಮುಂದಿನ ವಾರ ಅವರ ಹುಟ್ಟೂರಾದ ಅಮೆರಿಕದ ಕೆಂಟುಕಿಯಲ್ಲಿರುವ ಲೂಯಿಸ್ವಿಲ್ಲೆಯಲ್ಲಿ ನಡೆಯಲಿದೆ.
ಅಲಿಯವರ ಕುಟುಂಬಸ್ಥರು ಖಾಸಗಿಯಾಗಿ ಅಂತ್ಯಸಂಸ್ಕಾರ ವಿಧಿವಿಧಾನವನ್ನು ಮುಂದಿನ ಗುರುವಾರ ನಡೆಸಲಿದ್ದು, ಅವರ ಕಳೇಬರವನ್ನು ಶವಪೆಟ್ಟಿಗೆಯಲ್ಲಿರಿಸಿ ಜೂನ್ 10ರಂದು ಸಾರ್ವಜನಿಕ ದರ್ಶನಕ್ಕಿಡಲಾಗುವುದು. ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮೊದಲಾದವರು ಅಂತಿಮ ದರ್ಶನ ಮಾಡಲಿದ್ದಾರೆ.
ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದ ಮೊಹಮ್ಮದ್ ಅಲಿ ಮೊನ್ನೆ ಶುಕ್ರವಾರ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.
ತಮ್ಮ 18ನೇ ವಯಸ್ಸಿನಲ್ಲಿ ರೋಮ್ ಒಲಂಪಿಕ್ ಪದಕ ಗೆದ್ದಿದ್ದ ಅಲಿ ಮೂರು ಬಾರಿ ವಿಶ್ವ ಹೆವಿವೈಟ್ ಚಾಂಪಿಯನ್ ಆಗಿದ್ದರು. ನಾಗರಿಕ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದ ಮೊಹಮ್ಮದ್ ಅಲಿ 20ನೇ ಶತಮಾನದಲ್ಲಿ ಕ್ರೀಡಾ ಜಗತ್ತಿನಲ್ಲಿ ಅಪ್ರತಿಮ ವ್ಯಕ್ತಿಯಾಗಿ ಮೆರೆದಿದ್ದರು.