ಕ್ರೀಡೆ

ಐಒಸಿ ಸದಸ್ಯತ್ವಕ್ಕೆ ನೀತಾ ಅಂಬಾನಿ ನಾಮನಿರ್ದೇಶನ

Srinivasamurthy VN

ನವದೆಹಲಿ: ರಿಲಯನ್ಸ್ ಫೌಂಡೇಷನ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ನೀತಾ ಅಂಬಾನಿ ಅವರನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಲಾಗಿದ್ದು,  ಐಒಸಿ ಸದಸ್ಯತ್ವಕ್ಕ ನಾಮನಿರ್ದೇಶನವಾದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ನೀತಾ ಅಂಬಾನಿ ಪಾತ್ರವಾಗಿದ್ದಾರೆ.

ಶುಕ್ರವಾರ ಸ್ವಿಟ್ಜರ್‌ಲೆಂಡ್‌ನ ಲುಸಾನ್ ನಲ್ಲಿರುವ ಐಒಸಿಯ ಮುಖ್ಯ ಕಚೇರಿಯಲ್ಲಿ ನೀತಾ ಅಂಬಾನಿ ಅವರನ್ನು ನೂತನ ಸದಸ್ಯೆ ಸ್ಥಾನಕ್ಕೆ ನಾಮನಿರ್ದೇಶನ ಮಾಡಿತು. ಐಒಸಿಯ 129ನೇ ಸಮಾವೇಶವು   ರಿಯೊ ಡಿ ಜನೈರೊದಲ್ಲಿ ಆಗಸ್ಟ್ 2 ಹಾಗೂ 4ರಂದು ನಡೆಯಲಿದ್ದು, ಈ ವೇಳೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಒಮ್ಮೆ ಚುನಾವಣೆಯಲ್ಲಿ ಆಯ್ಕೆಯಾದವರು 70 ವರ್ಷ ವಯಸ್ಸಿನವರೆಗೂ  ಸದಸ್ಯರಾಗಿ ಮುಂದುವರಿಯುತ್ತಾರೆ.

ನೀತಾ ಅಂಬಾನಿ ಅವರನ್ನು ಐಒಸಿಗೆ ನಾಮನಿರ್ದೇಶನಗೊಳಿಸಿರುವುದನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಒಲಿಂಪಿಯನ್ ಶೂಟರ್ ಅಭಿನವ್ ಬಿಂದ್ರಾ ಸ್ವಾಗತಿಸಿದ್ದಾರೆ.  ನೀತಾ  ಅವರನ್ನು ಟ್ವಿಟರ್‌ನಲ್ಲಿ ಅಭಿನಂದಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು, ‘ನೀತಾ ಅವರಿಗೆ ಕ್ರೀಡೆಗಳ ಅಭಿವೃದ್ಧಿಯ ಕುರಿತು ಇರುವ ಒಲವು ಅಪಾರವಾದದ್ದು. ಭಾರತದ  ಮಹಿಳಾ ಸಮೂಹದ ಪ್ರತಿನಿಧಿಯಾಗಿ ಅವರು ಐಒಸಿಯಲ್ಲಿ ಇರಲಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಸಚಿನ್ ಮತ್ತು ಬಿಂದ್ರಾ ಮಾತ್ರವಲ್ಲದೇ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಮೇರಿ  ಕೋಮ್, ಟೆನಿಸ್ ತಾರೆ ಲಿಯಾಂಡರ್ ಪೇಸ್, ಭಾರತ ಒಲಿಂಪಿಕ್ ಸಂಸ್ಥೆ (ಐಎಒ) ಮಾಜಿ ಪ್ರಧಾನ ಕಾರ್ಯದರ್ಶಿ ರಾಜಾ ರಣಧೀರ್ ಸಿಂಗ್ ಅವರು ಕೂಡ ನೀತಾ ಅವರ ನಾಮ  ನಿರ್ದೇಶನವನ್ನು ಬೆಂಬಲಿಸಿದ್ದಾರೆ.

ಐಒಸಿಯಲ್ಲಿ ಭಾರತೀಯರ ಹೆಜ್ಜೆ
ಐಒಸಿಗೆ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಸರ್ ದೊರಾಬ್ಜಿ ಟಾಟಾ ಅವರಾಗಿದ್ದರು. 2000 ರಿಂದ 2014ರವರೆಗೆ ರಾಜಾ ರಣಧೀರ್ ಸಿಂಗ್ ಅವರು ಗೌರವ ಸದಸ್ಯರಾಗಿದ್ದರು.  1999ರಿಂದ ಈಚೆಗೆ ಐಒಸಿ ಸದಸ್ಯರ ಸಂಖ್ಯೆಯನ್ನು 115  ಮಂದಿಗೆ ಸೀಮಿತಗೊಳಿಸಲಾಗಿತ್ತು. ಅದರಲ್ಲಿ 70  ಮಂದಿ ವೈಯುಕ್ತಿಕ, 15 ಸಕ್ರಿಯ ಅಥ್ಲೀಟ್‌ಗಳು, ಅಂತಾರಾಷ್ಟ್ರೀಯ  ಫೆಡರೇಷನ್‌ನ 15 ಪ್ರತಿನಿಧಿಗಳು, ರಾಷ್ಟ್ರೀಯ ಸಂಸ್ಥೆಗಳ 15 ಪ್ರತಿನಿಧಿಗಳು ಸೇರಿದ್ದಾರೆ.

SCROLL FOR NEXT