ಅಹ್ಮದಾಬಾದ್: ಮಹಮದ್ ಅಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ...ಅವರು ಮರಡೋನಾ, ಮೆಸ್ಸಿ ಮತ್ತು ರೊನಾಲ್ಡೊಗಿಂತ ಶ್ರೇಷ್ಠ ಫುಟಬಾಲ್ ಆಟಗಾರ.. ಎಂದು ಟ್ವೀಟ್ ಮಾಡಿದ್ದ ಯುವತಿಗೆ ಟ್ವೀಟಿಗರು ಮಂಗಳಾರತಿ ಮಾಡಿರುವ ಘಟನೆ ನಡೆದಿದೆ.
ಬಾಕ್ಸಿಂಗ್ ಲೆಜೆಂಡ್ ಮಹಮದ್ ಅಲಿ ಇತ್ತೀಚೆಗಷ್ಟೇ ನಿಧನರಾಗಿದ್ದು, ಅವರ ನಿಧನ ವಾರ್ತೆ ವಿಶ್ವಾದ್ಯಂತ ಕಾಡ್ಗಿಚ್ಚಿನಂತೆ ಹರಡಿತ್ತು. ಇದರ ಬೆನ್ನಲ್ಲೇ ಅವರ ಬಗ್ಗೆ ತಿಳಿದವರು, ಅವರು ಯಾರೆಂದು ತಿಳಿಯದೇ ಇರುವವರು ಕೂಡ ಅವರ ಆತ್ಮಕ್ಕೆ ಶಾಂತಿಕೋರುವ ಭರದಲ್ಲಿ ಅವರ ಬಗ್ಗೆ ತಪ್ಪುತಪ್ಪಾಗಿ ಮಾತುಗಳನ್ನು ಆಡುತ್ತಿದ್ದಾರೆ. ಈ ಸಾಲಿಗೆ ಇದೀಗ ಗುಜರಾತ್ ಮೂಲದ ಯುವತಿ ಕೂಡ ಸೇರಿದ್ದು, ಆನಂದಿತ ಪಟೇಲ್ ಎಂಬ ಯುವತಿ ಮಹಮದ್ ಅಲಿ ಅವರನ್ನು ಶ್ರೇಷ್ಠ ಫುಟ್ಬಾಲಿಗ ಎಂದು ಬಿಂಬಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಆನಂದಿತ ಅವರ ಈ ಟ್ವೀಟ್ ಗೆ ಭಾರಿ ಟೀಕೆಗಳು ಮತ್ತು ವಿರೋಧ ವ್ಯಕ್ತವಾಗುತ್ತಿದ್ದು, ಬಾಲಿವುಡ್ ನಟರೂ ಸೇರಿದಂತೆ ಹಲವರು ಟ್ವಿಟರ್ ನಲ್ಲಿ ಆನಂದಿತ ಪಟೇಲ್ ಅವರ ಕಾಲೆಳೆದಿದ್ದಾರೆ.
ಆನಂದಿತ ಪಟೇಲ್ ರ ಈ ಪ್ರಮಾದ ಬಳಿಕ ಅವರಿಗೆ ತಿಳಿದು ಅವರು ತಮ್ಮ ಎಲ್ಲಾ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಷ್ಟೇ ಅಲ್ಲದೇ ತಮ್ಮ ಖಾತೆಯನ್ನೇ ಡಿಆಕ್ಟಿವೇಟ್ ಮಾಡಿದ್ದರೂ ಕೂಡ ಆ ಟ್ವೀಟ್ ಭಾವ ಚಿತ್ರಗಳನ್ನು ತೆಗೆದುಕೊಂಡ ಕೆಲವರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆನಂದಿತಾರನ್ನು ಹಾಸ್ಯ ಮಾಡಿದ್ದಾರೆ. ಅಲ್ಲದೆ ಕೆಲ ಮಂದಿ ಅವರ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಅವರ ಬಗ್ಗೆ ಹಾಸ್ಯ ಮಾಡುತ್ತಿದ್ದಾರೆ.
ಈಗ್ಗೆ ಕೆಲ ದಿನಗಳ ಹಿಂದಷ್ಟೇ ಕೇರಳದ ಸಚಿವರೊಬ್ಬರು ಮಹಮದ್ ಅಲಿ ಅವರನ್ನು ಕೇರಳ ಕ್ರೀಡಾಪಟು ಎಂದು ಕರೆಯುವ ಮೂಲಕ ಮಾಧ್ಯಮಗಳಲ್ಲಿ ಹಾಸ್ಯಕ್ಕೀಡಾಗಿದ್ದರು. ಬಳಿಕ ತಮ್ಮ ತಪ್ಪು ತಿಳಿದುಕೊಂಡ ಅವರು ಈ ಬಗ್ಗೆ ಕ್ಷಮೆ ಕೋರಿದ್ದರು. ಇದರ ಬೆನ್ನಲ್ಲೇ ಇದೀಗ ಗುಜರಾತ್ ಮೂಲದ ಯುವತಿ ತಮ್ಮ ಟ್ವೀಟ್ ಮೂಲಕ ಟ್ವೀಟಿಗರ ಆಹಾರವಾಗಿದ್ದಾರೆ.
ಆನಂದಿತ ಅವರ ಟ್ವೀಟ್ ಗೆ ಸಂಬಂಧಿಸಿದಂತೆ ಬಂದ ಟ್ವಿಟರ್ ಪ್ರತಿಕ್ರಿಯೆಗಳು ಇಲ್ಲಿವೆ.