ಕ್ರೀಡೆ

ಆಯ್ಕೆ ಟ್ರಯಲ್ಸ್ ಕೋರಿ ಸುಶೀಲ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಜಾ

Lingaraj Badiger
ನವದೆಹಲಿ: ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರು ರಿಯೋ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸುವ ಅವಕಾಶಕ್ಕಾಗಿ ಆಯ್ಕೆ ಟ್ರಯಲ್ಸ್ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಇದರಿಂದಾಗಿ ಕಳೆದೆರಡು ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದುಕೊಂಡಿದ್ದ ಸುಶೀಲ್ ಕುಮಾರ್ ಅವರ ಹ್ಯಾಟ್ರಿಕ್ ಕನಸು ಬಹುತೇಕ ನುಚ್ಚುನೂರಾದಂತಾಗಿದೆ.
ಸುಶೀಲ್ ಕುಮಾರ್​ಅವರ ಅರ್ಜಿಯನ್ನು ವಜಾಗೊಳಿಸಿದ ಕೋರ್ಟ್ ಭಾರತೀಯ ಕುಸ್ತಿ ಫೆಡರೇಷನ್ ಆಯ್ಕೆ ಪ್ರಕ್ರಿಯೆಯನ್ನು ಸೂಕ್ತವಾಗಿಯೇ ನಡೆಸಿದ್ದು, ಆಯ್ಕೆ ಟ್ರಾಯಲ್ಸ್ ಕಡ್ಡಾಯವೇನಲ್ಲ ಎಂದು ಹೇಳಿದೆ.
ಈಗ ಸುಶೀಲ್ ಕುಮಾರ್ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ. ಒಂದೊಮ್ಮೆ ಸುಪ್ರೀಂ ಕೋರ್ಟ ಮೆಟ್ಟಿಲೇರಿದಲ್ಲಿ ಪ್ರಕರಣ ಇನ್ನಷ್ಟು ಜಟಿಲಗೊಳ್ಳುವ ಹಾಗೂ ವಿವಾದ ಬಗೆಹರಿಯಲು ಮತ್ತಷ್ಟು ಸಮಯ ತೆಗೆದುಕೊಳ್ಳಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಸುಶೀಲ್ ಕುಮಾರ್ ಕಳೆದೆರಡು ಬಾರಿಯ ಒಲಿಂಪಿಕ್ಸ್​ನಲ್ಲಿ 74 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಪದಕ ಗೆದ್ದುಕೊಂಡಿದ್ದರು. ಆದರೆ ಈ ಬಾರಿ ಈ ವಿಭಾಗದ ಸ್ಪರ್ಧೆ ನಡೆಸದಿರಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ತೀರ್ಮಾನಿಸಿದೆ. ಇದರಿಂದಾಗಿ ಸುಶೀಲ್ ಕುಮಾರ್ ಅವರು ನಾರಸಿಂಗ್ ಸ್ಪರ್ಧಿಸುವ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವುದಾಗಿ ಹಠ ಹೊತ್ತು ಕುಳಿತಿದ್ದಾರೆ. ಇದು ಸಹಜವಾಗಿ ವಿವಾದಕ್ಕೆ ನಾಂದಿ ಹಾಡುವಂತೆ ಮಾಡಿತು. 
ಆಯ್ಕೆ ಟ್ರಯಲ್ಸ್ ನಡೆಸಿ ಅದರಲ್ಲಿ ಯಾರು ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೋ ಅವರನ್ನು ಒಲಿಂಪಿಕ್ಸ್ ಕಳುಹಿಸಿ ಎಂದು ಸುಶೀಲ್ ವಾದ ಮಂಡಿಸಿದರೆ, ಕಳೆದ ವರ್ಷ 66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ನಾರಸಿಂಗ್ ಪದಕ ಗೆದ್ದುಕೊಳ್ಳಬಹುದಾದ ಅವಕಾಶ ಹೊಂದಿದ್ದಾರೆನ್ನುವ ಕಾರಣದಿಂದ ಅವರನ್ನೇ ಆಯ್ಕೆ ಮಾಡಲಾಗಿದೆ.
SCROLL FOR NEXT