ಕ್ರೀಡೆ

ಏಷ್ಯಾಕಪ್ ಟಿ20: ಯುಎಇ ವಿರುದ್ಧ ಭಾರತಕ್ಕೆ ಸರಾಗ ಜಯ

Srinivasamurthy VN

ಢಾಕಾ: ಏಷ್ಯಾಕಪ್ ಟಿ20ಯ ಕೊನೆಯ ಲೀಗ್ ಪಂದ್ಯದಲ್ಲಿಯೂ ಯುಎಇ ವಿರುದ್ಧ ಭಾರತ ತಂಡ 9 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.

ಢಾಕಾದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ ರಕ್ಷಣಾತ್ಮಕ ಬ್ಯಾಟಿಂಗ್ ಮೊರೆ ಹೋಗಿ ಎಡವಿತು. ನೋಡ  ನೋಡುತ್ತಿದ್ದಂತೆಯೇ ಯುಎಇ ತಂಡ ಪ್ರಮುಖ ಬ್ಯಾಟ್ಸಮನ್ ಗಳನ್ನು ಕಳೆದುಕೊಂಡಿತು. ಶೈಮನ್ ಅನ್ವರ್ (43 ರನ್) ಅವರನ್ನು ಹೊರತು ಪಡಿಸಿದರೆ ಯುಎಇ ತಂಡ ಯಾವೊಬ್ಬ  ಆಟಗಾರನೂ ಕೂಡ ಗಟ್ಟಿಯಾಗಿ ನೆಲೆನಿಂತು ರನ್ ದಾಖಲಿಸುವ ಪ್ರಯತ್ನ ಮಾಡಲಿಲ್ಲ. ಅಂತಿಮವಾಗಿ ಯುಎಇ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ  ಶಕ್ತ್ಯವಾಯಿತು.

ಭಾರತದ ಪರ ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿ ಯುಎಇ ಪತನಕ್ಕೆ ಕಾರಣವಾದರು. 82 ರನ್ ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದೆ ಭಾರತ ತಂಡ ಆರಂಭದಲ್ಲಿ ಕೊಂಚ  ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿತಾದರೂ, ಬಳಿಕ ಚೇತರಿಸಿಕೊಂಡು ಆಕ್ರಮಣಕಾರಿ ಬ್ಯಾಟಿಂಗ್ ಮೊರೆ ಹೋಯಿತು. ಈ ಹಂತದಲ್ಲಿ 39 ರನ್ ಗಳಿ ಆಟವಾಡುತ್ತಿದ್ದ ರೋಹಿತ್ ಶರ್ಮಾ ಭಾರಿ  ಹೊಡೆತಕ್ಕೆ ಕೈಹಾಕಿ ಖಾದಿರ್ ಅಹ್ಮಮದ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಶಿಖರ್ ಧವನ್ (16 ರನ್) ಜೊತೆಗೂಡಿದ ಯುವರಾಜ್ ಸಿಂಗ್ (25 ರನ್) ಅಜೇಯ ಆಟವಾಡುವ ಮೂಲಕ ಇನ್ನೂ  ಬರೊಬ್ಬರಿ 59 ಎಸೆತ ಬಾಕಿ ಇರುವಂತೆಯೇ ಗುರಿ ಮುಟ್ಟಿ ನಿರಾಯಾಸವಾಗಿ ಗೆಲುವು ಸಾಧಿಸಿದರು.

ಉತ್ತಮವಾಗಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

SCROLL FOR NEXT