ಕ್ರೀಡೆ

ಕ್ರಿಕೆಟ್ ಆಟಗಾರರ ಭದ್ರತೆಗೆ ಹಾಕಿ ತಂಡದ ಮಾಜಿ ನಾಯಕ!

Rashmi Kasaragodu
ಮೊಹಾಲಿ: ಐಸಿಸಿ ಟಿ 20 ವಿಶ್ವಕಪ್ ಪಂದ್ಯವನ್ನಾಡುತ್ತಿರುವ ಕ್ರಿಕೆಟಿಗರಿಗೆ ಭದ್ರತೆ ಒದಗಿಸಲು  ಹಾಕಿ ತಂಡದ ಮಾಜಿ ನಾಯಕ! ಹೌದು, ಭಾರತದ ಹಾಕಿ ತಂಡದ ಮಾಜಿ ನಾಯಕ ರಾಜ್‌ಪಾಲ್ ಸಿಂಗ್ ಮತ್ತು ಮಾಜಿ ಕ್ರೀಡಾಪಟು ಗಗನ್ ಅಜಿತ್ ಸಿಂಗ್ ಇದೀಗ ಪಂಜಾಬ್ ಪೊಲೀಸ್ ಪಡೆಯಲ್ಲಿ ಇದ್ದಾರೆ.
ರಾಜ್‌ಪಾಲ್ ಸಿಂಗ್ ಅವರು ಮೊಹಾಲಿ ಡಿಎಸ್‌ಪಿ (ಟ್ರಾಫಿಕ್) ಆಗಿದ್ದು, ಫೀಲ್ಡ್ ಸ್ಟ್ರೈಕರ್ ಆಗಿದ್ದ ಗಗನ್ ಅಜಿತ್ ಸಿಂಗ್ ಅವರು ನಗರದ ಎಸ್‌ಪಿ ಆಗಿದ್ದಾರೆ.
ಈ ಹಿಂದೆ ಪಿಸಿಎ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವಾಗ ಮಾಜಿ ಹಾಕಿ ಆಟಗಾರರು, ಅಥ್ಲೀಟ್‌ಗಳಾದ ಸುನೀತಾ ರಾಣಿ, ಪರ್ಗಟ್ ಸಿಂಗ್ ಮೊದಲಾದವರು ಕೂಡಾ ಕ್ರಿಕೆಟಿಗರ ಭದ್ರತಾ ಕರ್ತವ್ಯ ನಿರ್ವಹಿಸಿದ್ದರು ಎಂದು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನ ಸಿಇಒ ಬ್ರಿಗೇಡಿಯರ್ ಜಿಎಸ್ ಸಂಧು ಹೇಳಿದ್ದಾರೆ. 
ಈ ಮೊದಲು ನಾವು ಕ್ರೀಡಾಪಟುಗಳಾಗಿ ದೇಶ ಸೇವೆ ಮಾಡುತ್ತಿದ್ದೆವು. ಇದೀಗ ಪೊಲೀಸ್ ಪಡೆ ಸೇರಿ ದೇಶ ಸೇವೆ ಮಾಡುತ್ತಿದ್ದೇವೆ. 2007ರಲ್ಲಿ ನಾನು ಪೊಲೀಸ್ ಸೇವೆಗೆ ಸೇರಿದೆ. ಈ ಯುನಿಫಾರ್ಮ್‌ನಲ್ಲಿ ಸೇವೆ ಮಾಡುವುದು ನನಗೆ ವಿಶೇಷ ಅನುಭವವನ್ನೇ ನೀಡುತ್ತದೆ ಎಂದು ಗಗನ್ ಅಜಿತ್ ಹೇಳಿದ್ದಾರೆ.
ನಾವು ಕ್ರೀಡಾಪಟುವಾಗಿದ್ದಾಗಲೂ, ಈಗ ಪೊಲೀಸ್ ಅಧಿಕಾರಿಯಾಗಿರುವಾಗಲೂ ನಮ್ಮ ಕರ್ತವ್ಯದಲ್ಲಿ ವ್ಯತ್ಯಾಸಗಳೇನೂ ಇಲ್ಲ. ಎರಡರಲ್ಲೂ ನಾವು ದೇಶ ಸೇವೆಯನ್ನೇ ಮಾಡುತ್ತಿದ್ದೇನೆ. ನಮ್ಮ ಯುನಿಫಾರ್ಮ್‌ನ ಬಣ್ಣ ಮಾತ್ರ ಬದಲಾಗಿದೆ. ಈ ಹಿಂದೆ ನಾವು ನೀಲಿ ಬಣ್ಣದ ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುತ್ತಿದ್ದೆವು ಈಗ ನಾವು ಖಾಕಿ ಬಣ್ಣ ಧರಿಸುತ್ತೇವೆ. ನಮ್ಮ ಕೆಲಸಗಳು ಅದೇ ರೀತಿ ಇವೆ. ನಮ್ಮಲ್ಲಿನ ಉತ್ಸಾಹವೂ ಅದೇ ರೀತಿ ಇದೆ. ನಮ್ಮ ವೃತ್ತಿ ಕ್ಷೇತ್ರ ಮಾತ್ರ ಬದಲಾಗಿದೆ ಎಂದು ರಾಜ್ ಪಾಲ್ ಸಿಂಗ್  ಹೇಳಿದ್ದಾರೆ.
ಮಂಗಳವಾರ ಮೊಹಾಲಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ಪಾಕಿಸ್ತಾನದ ನಡುವಿನ ಪಂದ್ಯದ ವೇಳೆ ಈ ಪೊಲೀಸರು ಅಲ್ಲಿ ಕರ್ತವ್ಯ ನಿರತರಾಗಿದ್ದರು.
SCROLL FOR NEXT