ರಾಂಚಿ: ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ದುಬಾರಿ ಕಾರುಗಳಲ್ಲೊಂದಾದ ಹಮ್ಮರ್ ಕಾರು ಖರೀದಿಸಿದ್ದು, ರಾಂಚಿ ಸಾರಿಗೆ ಇಲಾಖೆಯಲ್ಲಿ ಹಮ್ಮರ್ ಕಾರನ್ನು ಸ್ಕಾರ್ಪಿಯೋ ಎಂದು ತಪ್ಪಾಗಿ ನೋಂದಣಿ ಮಾಡಲಾಗಿದೆ. ಹಮ್ಮರ್ ಕಾರು ಸ್ಕಾರ್ಪಿಯೋ ಕಾರಿಗಿಂತ ಮೂರು ಪಟ್ಟು ದುಬಾರಿಯಾಗಿರುವ ಕಾರಣ, ಧೋನಿ ಈಗ ಹಮ್ಮರ್ ಕಾರಿನ ಬೆಲೆಯನುಸಾರ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿದೆ. ಅಂದರೆ ಧೋನಿ ಖರೀದಿಸಿರುವ ಹಮ್ಮರ್ ಹೆಚ್ 2 ಕಾರಿನ ಬೆಲೆ ರು. 43 ಲಕ್ಷ ಆಗಿದೆ. ಇದಕ್ಕೆ ಅನುಸಾರವಾಗಿ ಧೋನಿ 15 ವರ್ಷಕ್ಕಿರುವ ನೋಂದಣಿ ಶುಲ್ಕ ರು. 1.5 ಲಕ್ಷವನ್ನು ರಾಂಚಿ ಸಾರಿಗೆ ಇಲಾಖೆಗೆ ಪಾವತಿ ಮಾಡಬೇಕಿದೆ.
ಪ್ರಸ್ತುತ ಹಮ್ಮರ್ ಕಾರಿನ ಬೆಲೆ ರು. 43 ಲಕ್ಷ. ಕಾರಿನ ನೋಂದಣಿಗಾಗಿ ಧೋನಿ ಈಗ ರು. 1,59,804ನ್ನು ಪಾವತಿ ಮಾಡಬೇಕಿದೆ ಎಂದು ರಾಂಚಿ ಜಿಲ್ಲಾ ಸಾರಿಗೆ ಅಧಿಕಾರಿ ನಾಗೇಂದ್ರ ಪಾಸ್ವಾನ್ ಹೇಳಿದ್ದಾರೆ.
ಆದಾಗ್ಯೂ, ಇಷ್ಟೊಂದು ವಿಳಂಬವಾಗಿ ನೋಂದಣಿ ಶುಲ್ಕ ಪಾವತಿ ಮಾಡುವುದರಿಂದ, ಅದಕ್ಕಾಗಿ ಎಷ್ಟು ದಂಡ ಕಟ್ಟಬೇಕು ಎಂಬುದನ್ನು ಈವರೆಗೆ ಲೆಕ್ಕ ಹಾಕಿಲ್ಲ ಎಂದು ಸಾರಿಗೆ ಇಲಾಖೆ ಹೇಳಿದೆ.
ಮಾರ್ಚ್ 21 ರಂದು ಧೋನಿಯ ಕಡೆಯ ವ್ಯಕ್ತಿಯೊಬ್ಬರು ಬೆಲೆ ಪಟ್ಟಿ, ನೋಂದಣಿ ಪತ್ರ, ವಿಮೆ ಕಾಗದ ಮತ್ತು ವಾಹನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಜಿಲ್ಲಾ ಸಾರಿಗೆ ಕಚೇರಿಗೆ ಸಲ್ಲಿಸಿದ್ದರು. ಆದಾಗ್ಯೂ, ವಾಹನಕ್ಕೆ ಸಂಬಂಧಿಸಿದ ತೆರಿಗೆ ದಾಖಲೆ ಪತ್ರಗಳು ಅದರಲ್ಲಿ ಇಲ್ಲದೇ ಇದ್ದುದರಿಂದ ಈ ಕಾರ್ಯಗಳು ವಿಳಂಬವಾಯಿತು ಎಂದು ಪಾಸ್ವಾನ್ ಹೇಳಿದ್ದಾರೆ.
ಆಮದು ಆಗಿರುವ ಹಮ್ಮರ್ ಕಾರಿನ ತೆರಿಗೆ ದಾಖಲೆ ಪತ್ರಗಳು ಬುಧವಾರ ಸಾರಿಗೆ ಇಲಾಖೆ ಕೈ ಸೇರಿದೆ.
2008 ಇಸವಿಯಲ್ಲಿರುವ ಕಾರಿನ ಬೆಲೆ ಪಟ್ಟಿ ಪ್ರಕಾರ ವಾಹನ ಸಂಖ್ಯೆ JH01AB 7781 ಹಮ್ಮರ್ ಕಾರಿನ ಬೆಲೆ 39,000 ಪೌಂಡ್‌ಗಳಾಗಿವೆ. ಈ ಬೆಲೆಯನ್ನು ರುಪಾಯಿಗೆ ಪರಿವರ್ತಿಸಿ ಕಾರಿನ ಈಗಿನ ಬೆಲೆಯನ್ನು ನಿರ್ಧರಿಸಲಾಗುವುದು.
2012ರಲ್ಲಿ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡುವಾಗ ಹಮ್ಮರ್ ಕಾರು ಸ್ಕಾರ್ಪಿಯೋ ಆಗಿ ಬದಲಾಗಿತ್ತು. ಅದು ಟೈಪಿಂಗ್ ಸಮಸ್ಯೆಯಾಗಿದ್ದು, ಅದನ್ನು ನಾವು ಸರಿಮಾಡಿದ್ದೇವೆ ಅಂದಿದ್ದಾರೆ ಪಾಸ್ವಾನ್.
ಅದೇ ವೇಳೆ 2011 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಪ್ರತೀ ವರ್ಷವೂ ರಸ್ತೆ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ.