ಕ್ರೀಡೆ

ಪತ್ನಿ ಆತ್ಮಹತ್ಯೆ: ರಾಷ್ಟ್ರೀಯ ಕಬ್ಬಡ್ಡಿ ಪಟು ರೋಹಿತ್ ಚಿಲ್ಲರ್ ಬಂಧನ!

Srinivasamurthy VN

ನವದೆಹಲಿ: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದ ಲಲಿತಾ ಅವರ ಪ್ರಕರಣಕ್ಕೆ ಸಂಬಂಧಸಿದಂತೆ ದೆಹಲಿ ಪೊಲೀಸರು ಶುಕ್ರವಾರ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ರೋಹಿತ್ ಚಿಲ್ಲರ್ ಅವರನ್ನು ಬಂಧಿಸಿದ್ದಾರೆ.

ಕಬ್ಬಡ್ಡಿ ಆಟಗಾರ ರೋಹಿತ್ ಚಿಲ್ಲರ್ ಅವರು ಲಲಿತಾ ಅವರ ಪತಿಯಾಗಿದ್ದು, ಪತ್ನಿ ಆತ್ಮಹತ್ಯೆ ಬಳಿಕ ನಾಪತ್ತೆಯಾಗಿದ್ದರು. ದೆಹಲಿಯ ನಂಗೊಲೈ ಪ್ರದೇಶದಲ್ಲಿ ಲಲಿತಾ ಅವರು ನೇಣುಬಿಗಿದ  ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶವದ ಬಳಿ ಡೆತ್ ನೋಟ್ ಮತ್ತು ಆಡಿಯೋ ಟೇಪ್ ಕೂಡ ಪತ್ತೆಯಾಗಿ, ಅದನ್ನು ಪೊಲೀಸರು ಪರಿಶೀಲಿಸಿದ್ದರು. ಪತ್ರದಲ್ಲಿ ತಮ್ಮ ಸಾವಿಗೆ ಪತಿ ರೋಹಿತ್ ಚಿಲ್ಲರ್  ಅವರೇ ಕಾರಣ ಎಂದು ಹೇಳಿದ್ದ ಲಲಿತಾ ಅವರು, ರೋಹಿತ್ ತಮಗೆ ಸಾಕಷ್ಟು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದರು. ಅವರ ಹಿಂಸೆ ತಾಳಲಾರದೇ ತಾವು  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು, ರೋಹಿತ್ ಚಿಲ್ಲರ್ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಆತ್ಮಹತ್ಯೆ ವಿಚಾರ ತಿಳಿದಿದ್ದ ರೋಹಿತ್ ನಾಪತ್ತೆಯಾಗಿದ್ದರು. ಇದೀಗ ಮುಂಬೈನಲ್ಲಿ  ರೋಹಿತ್ ಅವರನ್ನು ಬಂಧಿಸಲಾಗಿದ್ದು, ಸಂಜೆಯೊಳಗೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಅವರನ್ನು ಹಾಜರು ಪಡಿಸುವ ಸಾಧ್ಯತೆ ಇದೆ. ಇದೇ ಪ್ರಕರಣ ಸಂಬಂಧ ನಿನ್ನೆಯಷ್ಟೇ  ರೋಹಿತ್ ಅವರ ತಂದೆ ಕೂಡ ದೆಹಲಿ ಪೊಲೀಸರ ಬಳಿ ಶರಣಾಗಿದ್ದರು.

ಇದೀಗ ಇಬ್ಬರ ವಿರುದ್ಧವೂ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಗೃಹ ಹಿಂಸೆ ಕಾಯ್ದೆದಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೇವಲ 6 ತಿಂಗಳ ಹಿಂದಷ್ಟೇ ರೋಹಿತ್ ಹಾಗೂ ಲಲಿತಾ ಅವರ  ಮದುವೆಯಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

ರಾಷ್ಟೀಯ ಮಟ್ಟದ ಕಬ್ಬಡ್ಡಿ ಆಟಗಾರರಾಗಿರುವ ರೋಹಿತ್ ಚಿಲ್ಲರ್ ಅವರು ಇತ್ತೀಚೆಗೆ ನಡೆದ ಪ್ರೋಕಬ್ಬಡ್ಡಿ ಸರಣಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಪ್ರತಿನಿಧಿಸಿದ್ದರು.

SCROLL FOR NEXT