ಕ್ರೀಡೆ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್: ಭಾರತದ ಶರದ್ ಕುಮಾರ್‌ ಗೆ ಬೆಳ್ಳಿ, ವರುಣ್ ಭಾಟಿಗೆ ಕಂಚು

Srinivasamurthy VN

ನವದೆಹಲಿ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ಭಾನುವಾರ ಭಾರತದ ಪದಕ ಪಟ್ಟಿಗೆ ಎರಡು ಪದಕಗಳು ಸೇರ್ಪಡೆಯಾಗಿದ್ದು, ಪುರುಷರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾರತದ ಶರದ್ ಕುಮಾರ್ ಬೆಳ್ಳಿ ಮತ್ತು ವರುಣ್  ಸಿಂಗ್ ಭಾಟಿ ಕಂಚು ಪಡೆದಿದ್ದಾರೆ.

ಟಿ 42 ಹೈಜಂಪ್‌ ಸ್ಪರ್ಧೆಯಲ್ಲಿ ಶರದ್ ಕುಮಾರ್ 1.84 ಮೀಟರ್ ಎತ್ತರಕ್ಕೆ ಹಾರಿ ಜೀವನಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಕೇವಲ 0.02 ಮೀಟರ್ ಅಂತರದಲ್ಲಿ ಅವರಿಗೆ ಚಿನ್ನ ತಪ್ಪಿತು. ಚಿನ್ನದ ಪದಕ ಗೆದ್ದ  ಅಮೆರಿಕದ ಸ್ಯಾಮ್ ಗ್ವೇವೆ 1.86 ಮೀಟರ್ ಎತ್ತರಕ್ಕೆ ಹಾರಿ ಚಿನ್ನ ಪಡೆದರು.

ಇನ್ನು ಭಾರತದ ವರುಣ್ ಭಾಟಿ 1.77 ಮೀಟರ್ ಸಾಧನೆಯೊಂದಿಗೆ ಕಂಚು ಪಡೆದರು. ಆ ಮೂಲಕ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತ ಪಡೆದಿರುವ ಪದಕಗಳ ಸಂಖ್ಯೆ ಐದಕ್ಕೆ ಏರಿಸಿಕೊಂಡಿದೆ.

ಸ್ಪರ್ಧೆ ಬಳಿಕ ಮಾತನಾಡಿದ ಶರದ್ ಕುಮಾರ್ ನಾನು ಜಿಗಿಯುವಾಗ ಹೆಚ್ಚು ಎತ್ತರಕ್ಕೆ ಜಿಗಿದಿದ್ದೇನೆ ಎಂದು ಭಾವಿಸಿದ್ದೆ. ಆದರೆ ಕೆಲವೇ ಇಂಚುಗಳ ಅಂತರದಲ್ಲಿ ಚಿನ್ನ ಕೈತಪ್ಪಿದೆ. ಬೆಳ್ಳಿ ಪದಕ ಗೆದ್ದಿದ್ದು, ಹರ್ಷ ತಂದಿದೆ ಎಂದು  ಹೇಳಿದ್ದಾರೆ.

ಈ ಹಿಂದೆ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಜಾವೆಲಿನ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದರು. ಅಮಿತ್ ಸರೋಹಾ ಕ್ಲಬ್ ಇವೆಂಟ್‌ನಲ್ಲಿ ಬೆಳ್ಳಿ ಪದಕ  ಗೆದ್ದುಕೊಂಡಿದ್ದರು.ಮಹಿಳೆಯರ ಎಫ್ 55 ಡಿಸ್ಕಸ್ ಎಸೆತದಲ್ಲಿ ಕರಂಜ್ಯೋತಿ ದಲಾಲ್ ಕಂಚು ಪಡೆದಿದ್ದರು.

SCROLL FOR NEXT