ಬೆಳ್ಳಿ ಪದಕ ಗೆದ್ದ ಭಾರತದ ಗುರುರಾಜ್
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಟ್ ಕೋಸ್ಚ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದ್ದು, ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಟೂರ್ನಿಯ ಮೊದಲ ಪದಕ ಲಭಿಸಿದೆ.
ಪುರುಷರ 56 ಕೆಜಿ ವಿಭಾಗದಲ್ಲಿ ಭಾರತದ ಗುರುರಾಜ್ ಅವರು ಬೆಳ್ಳಿ ಪದಕ ಸಾಧಿಸಿದ್ದಾರೆ. ಒಟ್ಟು ಮೂರು ಸುತ್ತಿನ ಪಂದ್ಯದಲ್ಲಿ ಗುರುರಾಜ ಒಟ್ಟು 249 ಕೆಜಿ ತೂಕ ಎತ್ತುವ ಎರಡನೇ ಸ್ಥಾನ ಗಿಟ್ಟಿಸುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಇದೇ ವಿಭಾಗದಲ್ಲಿ ಒಟ್ಟು 261 ಕೆಜಿ ತೂಕ ಎತ್ತಿದ ಮಲೇಷ್ಯಾದ ವೇಟ್ ಲಿಫ್ಟರ್ ಮಹಮದ್ ಇಜಾರ್ ಅಹ್ಮದ್ ಚಿನ್ನದ ಪದಕ ಗೆದ್ದಿದ್ದು, 248 ಕೆಜಿ ತೂಕ ಎತ್ತಿದ ಶ್ರೀಲಂಕಾದ ವೇಟ್ ಲಿಫ್ಟರ್ ಲಕ್ಮಲ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ನಿನ್ನೆಯಷ್ಟೇ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ 2018 ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿತ್ತು. ಭಾರತದ ಅಥ್ಲೆಟಿಕ್ಸ್ ತಂಡವನ್ನು ಪಿವಿ ಸಿಂಧು ಮುನ್ನಡೆಸಿದ್ದರು. ಈ ಟೂರ್ನಿಯಲ್ಲಿ ಭಾರತವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರದ ಒಟ್ಟು 6600 ಮಂದಿ ಅಥ್ಲೆಟಿಕ್ ಪಟುಗಳು ಪಾಲ್ಗೊಂಡಿದ್ದಾರೆ.