ಕ್ರೀಡೆ

ಕೊಠಡಿಯಲ್ಲಿ ಸೂಜಿ ಪತ್ತೆ, ಕೂಟದಿಂದ ಭಾರತೀಯ ಅಥ್ಲೀಟ್ ಗಳ ಹೊರಗೆ ಹಾಕಿದ ಅಧಿಕಾರಿಗಳು!

Srinivasamurthy VN
ಗೋಲ್ಡ್ ಕೋಸ್ಟ್: ಒಂದೆಡೆ ಭಾರತೀಯ ಕ್ರೀಡಾಪಟುಗಳು ಪದಕಗಳ ಮೇಲೆ ಪದಕಗಳನ್ನು ಬಾಚುತ್ತ ದೇಶದ ಕೀರ್ತಿ ಉತ್ತುಂಗಕ್ಕೇರಿಸುತ್ತಿದ್ದರೆ, ಇತ್ತ ಇದೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕೆಲ ಅಥ್ಲೀಟ್ ಗಳಿಂದ ಭಾರತ ಮುಖಭಂಗ ಅನುಭವಿಸುವಂತಾಗಿದೆ.
ಹೌದು.. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಭಾರತದ ಇಬ್ಬರು ಕ್ರೀಡಾಪಟುಗಳನ್ನು ಕೂಟದಿಂದ ಹೊರಗೆ ಹಾಕಲಾಗಿದೆ. ಮೂಲಗಳ ಪ್ರಕಾರ ಕ್ರೀಡಾಪಟುಗಳು ತಂಗಿದ್ದ ಕೊಠಡಿಯಲ್ಲಿ ಔಷಧಿ ತೆಗೆದುಕೊಳ್ಳುವ ಸೂಜಿಗಳು ಪತ್ತೆಯಾಗಿದ್ದು, ಇದೇ ಕಾರಣಕ್ಕೆ ಅವರನ್ನು ಕೂಟದಿಂದ ಹೊರಗೆ ಹಾಕಲಾಗಿದೆ ಎನ್ನಲಾಗಿದೆ.
ಭಾರತದ ಟ್ರಿಪಲ್ ಜಂಪರ್ ರಾಕೇಶ್ ಬಾಬು ಹಾಗೂ ರೇಸ್ ವಾಕರ್ ಇರ್ಫಾನ್ ಕೊಲೊಥುಮ್ ಥೋಡಿ ಅವರನ್ನು ಅಧಿಕಾರಿಗಳು ಕೂಟದಿಂದ ಹೊರಕ್ಕೆ ಹಾಕಿದ್ದಾರೆ. ಕ್ರೀಡಾ ಗ್ರಾಮದಲ್ಲಿರುವ ಈ ಇಬ್ಬರು ಆಟಗಾರರ ಬೆಡ್ ರೂಂ ನ ಕಪ್ ಒಳಗೆ ಸೂಜಿಗಳನ್ನು ಅಡಗಿಸಿಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರೀಡಾಪಟುಗಳ ಕೊಠಡಿಯನ್ನು ಸಾಮಾನ್ಯದಂತೆ ಶೋಧ ನಡೆಸುತ್ತಿದ್ದಾಗ ಈ ವಸ್ತುಗಳು ಪತ್ತೆಯಾಗಿತ್ತು. ಎಂದು ತಿಳಿದುಬಂದಿದೆ. ಈ ಬಗ್ಗೆ ಆಟಗಾರರನ್ನು ವಿಚಾರಿಸಿದಾಗ ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಹೀಗಾಗಿ ಈ ಇಬ್ಬರು ಆಟಗಾರರು ಹಾಗೂ ಅವರ ಅಧಿಕಾರಿಗಳನ್ನು ಕೂಟದಿಂದ ಹೊರಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಇಬ್ಬರು ಆಟಗಾರರು ಮಾತ್ರವಲ್ಲದೇ ಭಾರತೀಯ ಅಧಿಕಾರಿಗಳಾದ ವಿಕ್ರಮ್ ಸಿಂಗ್ ಸಿಸೋಡಿಯಾ, ತಂಡದ ಮ್ಯಾನೇಜರ್ ನಾಮ್ ದೇವ್ ಶಿರಗಾಂವ್ಕರ್, ಅಥ್ಲೆಟಿಕ್ಸ್ ತಂಡದ ಮ್ಯಾನೇಜರ್ ರವೀಂದರ್ ಚೌದರಿ ಅವರನ್ನು ಕೂಟದಿಂದ ಹೊರ ಹಾಕಲಾಗಿದೆ ಎಂದು ಕ್ರೀಡಾಕೂಟದ ವಕ್ತಾರ ಮಾರ್ಟಿನ್ ತಿಳಿಸಿದ್ದಾರೆ.
ಇನ್ನು ಕ್ರೀಡಾಕೂಟದಲ್ಲಿ ಯಾವುದೇ ಅಥ್ಲೀಟ್ ಗಳು ಯಾವುದೇ ರೀತಿಯ ಔಷದಿಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಕೂಟದ ವೈದ್ಯರ ಸಮಿತಿಯ ಅನುಮತಿ ಇರಬೇಕು. ಆದಕೆ ಭಾರತೀಯ ಅಥ್ಲೀಟ್ ಗಳು ಯಾವುದೇ ರೀತಿಯ ಅನುಮತಿ ಇಲ್ಲದೇ ಸೂಜಿಗಳನ್ನು ಹೊಂದಿದ್ದರು ಎನ್ನಲವಾಗಿದೆ.
SCROLL FOR NEXT