ಉಡುಪಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಗೇಮ್ಸ್ ನ 56 ಕೆಜಿ ತೂಕದ ವೈಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯದ ಕ್ರೀಡಾಪಟು ಗುರುರಾಜ್ ಪೂಜಾರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಧಿಕಾರಿಗಳು ಗುರುರಾಜ್ ಪೂಜಾರಿಯನ್ನು ಬರಮಾಡಿಕೊಂಡರು. ಇದೇ ವೇಳೆ ವಿಶೇಷ ವಾಹನದ ಮೂಲಕ ಅವರನ್ನು ಕುಂದಾಪುರಕ್ಕೆ ಕರೆದೊಯ್ಯಲಾಯಿತು.
ಈ ವೇಳೆ ಮಾತನಾಡಿದ ಗುರುರಾಜ್ ಪೂಜಾರಿ ಅವರು ನನಗೆ ಬಹಳ ಸಂತೋಷವಾಗಿದೆ. ಕ್ರೀಡಾಕೂಟದಲ್ಲಿ ಭಾರತ ಪರ ನಾನು ಮೊದಲ ಪದಕ ಗೆದ್ದಿದೆ. ಇನ್ನು ಸ್ಥಳೀಯರು ಹಾಗೂ ಅಧಿಕಾರಿಗಳು ನನಗೆ ಅದ್ಧೂರಿ ಸ್ವಾಗತ ನೀಡಿದ್ದು ಖುಷಿ ತಂದಿದೆ ಎಂದರು.
ಸ್ಥಳೀಯ ಆಟಗಾರರಿಗೆ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಇನ್ನು ಹೆಚ್ಚು ಪದಕಗಳನ್ನು ಗೆಲ್ಲಬಹುದು. ಇನ್ನು ಏಷ್ಯಾನ್ ಗೇಮ್ಸ್ ಮತ್ತು 2020ರ ಸಮ್ಮರ್ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ನನ್ನ ಮುಂದಿನ ಗುರಿ ಎಂದು ಗುರುರಾಜ್ ಹೇಳಿದ್ದಾರೆ.