ಪ್ಯಾರಾ ಈಜುಗಾರ ಪ್ರಶಾಂತ್ ಕರ್ಮಾಕರ್
ಬೆಂಗಳೂರು: ಮಹಿಳಾ ಈಜುಪಟುಗಳ ವಿಡಿಯೋ ರೆಕಾರ್ಡ್ ಮಾಡಿದ ಹಿನ್ನಲೆಯಲ್ಲಿ ಪ್ಯಾರಾ ಈಜುಗಾರ ಪ್ರಶಾಂತ್ ಕರ್ಮಾಕರ್ ಅವರನ್ನು ಭಾರತದ ಪ್ಯಾರಾಲಿಂಪಿಕ್ ಸಮಿತಿ ಗುರುವಾರ ವಜಾ ಮಾಡಿದೆ.
ಕಳೆದ ವರ್ಷ ಮಾರ್ಚ್ 31 ರಿಂದ ಏಪ್ರಿಲ್ 3 ರವರೆಗೂ ಜೈಪುರದಲ್ಲಿ ರಾಷ್ಟ್ರೀಯ ಪ್ಯಾರಾ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಡೆದಿತ್ತು. ಸ್ಪರ್ಧೆಯಲ್ಲಿ ಮಹಿಳಾ ಈಜುಪಟುಗಳು ಸ್ಪರ್ಧಿಸಿದ್ದರು. ಈ ವೇಳೆ ಪ್ರಶಾಂತ್ ಕರ್ಮಾಕರ್ ಅವರು ಕೆಟ್ಟದಾಗಿ ವರ್ತಿಸಿದ್ದರಿಂದಾಗಿ ಅವರನ್ನು ವಜಾ ಮಾಡಲಾಗಿದೆ ಎಂದು ಪಿಸಿಐ (ಭಾರತದ ಪ್ಯಾರಾಲಿಂಪಿಕ್ ಸಮಿತಿ) ಹೇಳಿದೆ.
ಸ್ಪರ್ಧೆ ವೇಳೆ ಕರ್ಮಾಕರ್ ಅವರು ತಮ್ಮ ಜೊತೆಗಾರರೊಬ್ಬರ ಕೈಯಲ್ಲಿ ಕ್ಯಾಮೆರಾ ಕೊಟ್ಟು ಮಹಿಳಾ ಈಜುಪಟುಗಳ ವಿಡಿಯೋ ಮಾಡುವಂತೆ ತಿಳಿಸಿದ್ದಾರೆ. ಇದರಂತೆ ವ್ಯಕ್ತಿ ವಿಡಿಯೋ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಮಹಿಳಾ ಈಜುಪಟುಗಳ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಪಿಸಿಐ ಅಧ್ಯಕ್ಷ ಡಾ.ವಿಕೆ. ದಬಾಸ್ ಅವರು ವ್ಯಕ್ತಿಯನ್ನು ಕರೆದು ಘಟನೆ ಸಂಬಂಧ ವಿಚಾರಿಸಿದ್ದಾರೆ. ಈ ವೇಳೆ ಕ್ಯಾಮೆರಾವನ್ನು ಕರ್ಮಾಕರ್ ಅವರೇ ನನಗೆ ಕೊಟ್ಟಿದ್ದು, ವಿಡಿಯೋ ಮಾಡುವಂತೆ ಅವರೇ ತಿಳಿಸಿದ್ದಾರೆಂದು ಹೇಳಿದ್ದಾನೆ.
ಈ ಘಟನೆ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಸ್ವತಃ ಪ್ರಶಾಂತ್ ಕರ್ಮಾಕರ್ ಅವರೇ ಮಹಿಳಾ ಈಜುಪಟುಗಳ ವಿಡಿಯೋ ಮಾಡಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿದೆ. ವಿಡಿಯೋವನ್ನು ತೆಗೆದುಹಾಕುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ವೇಳೆ ಕರ್ಮಾಕರ್ ಅವರು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಪಿಸಿಐ ಅಧ್ಯಕ್ಷರನ್ನು ಕರೆದು ಕೋಪದಲ್ಲಿ ಮಾತನಾಡಿದ್ದಾರೆ. ವಿಡಿಯೋ ಮಾಡಲು ಕಳುಹಿಸಿದ್ದ ವ್ಯಕ್ತಿಯನ್ನೇಕೆ ತಡೆದಿರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಈಜುಪಟುಗಳ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದು, ವಿಡಿಯೋ ಮಾಡದಂತೆ ತಿಳಿಸಿದ್ದಾರೆ. ಬಳಿಕ ಕರ್ಮಾಕರ್ ಅವರು ಬರವಣಿಗೆ ಮೂಲಕ ವಿರೋಧ ವ್ಯಕ್ತಪಡಿಸಲಿ ಎಂದು ತಿಳಿಸಿದ್ದಾರೆ.
ಇದರಂತೆ ಮಹಿಳಾ ಈಜುಪಟುಗಳ ಪೋಷಕರು ಬರವಣಿಗೆ ಮೂಲಕವೇ ವಿರೋಧ ವ್ಯಕ್ತಪಡಿಸಿ, ದೂರು ನೀಡಿದ್ದಾರೆ. ಇದಾದ ಬಳಿಕವೂ ಕರ್ಮಾಕರ್ ಅವರು ತಾವು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದು, ವಿಡಿಯೋವನ್ನು ತೆಗೆದುಹಾಕುವುದಿಲ್ಲ ಎಂದು ವಾದ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಕರ್ಮಾಕರ್ ಅವರನ್ನು ಬಂಧನಕ್ಕೊಳಪಡಿಸಿದರು. ಬಳಿಕ ಅವರನ್ನು ಬಿಡುಗಡೆ ಮಾಡಿದ್ದಾರೆಂದು ತಿಳಿದುಬಂದಿದೆ.
ಘಟನೆ ಬಳಿಕ ಕರ್ಮಾಕರ್ ಅವರು ವಿಡಿಯೋವನ್ನು ತೆಗೆದು ಹಾಕಿದ್ದಾರೆಂದು ಹೇಳಲಾಗುತ್ತಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಿಸಿಐ, ಕರ್ಮಾಕರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹರಿಯಾಣ ಕ್ರೀಡಾ ಇಲಾಖೆಗೆ ಸೂಚಿಸಿದೆ. ಇದೀಗ ಕರ್ಮಾಕರ್ ವಿರುದ್ಧ ಪಿಸಿಐ ಕ್ರಮ ಕೈಗೊಂಡಿದ್ದು, ಮೂರು ವರ್ಷಗಳ ಕಾಲ ಅಮಾನತು ಮಾಡಿದೆ ಎಂದು ತಿಳಿದುಬಂದಿದೆ.