ಜಕಾರ್ತಾ: ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಭಾರತದ ಪ್ರಶಸ್ತಿ ಆಸೆ ಕಮರಿದ್ದು, ಭಾರತದ ಅಗ್ರ ಕ್ರಮಾಂಕದ ಶಟ್ಲರ್ ಸೈನಾ ನೆಹ್ವಾಲ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಸೋಲು ಅನುಭವಿಸಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 3 ಬಾರಿ ಇಂಡೋನೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ವಿಜೇತೆ ಸೈನಾ ನೆಹ್ವಾಲ್ ವಿಶ್ವದ ನಂ. 1 ಆಟಗಾರ್ತಿ ತೈವಾನ್ ನ ತಾಯ್ ತ್ಸು ಯಿಂಗ್ ಅವರ ವಿರುದ್ದ 21-9, 21-13 ನೇರ ಸೆಟ್ ಗಳ ಅಂತರದಿಂದ ಸೋಲು ಅನುಭವಿಸಿದರು. ಆ ಮೂಲಕ ವರ್ಷದ ಮೊದಲ ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾದರು. ಕೇವಲ 27 ನಿಮಿಷ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ್ದ ತೈವಾನ್ ಆಟಗಾರ್ತಿ ಅರ್ಹವಾಗಿಯೇ ಪ್ರಶಸ್ತಿಗೆ ಮುತ್ತಿಟ್ಟರು.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ 4ನೇ ಶ್ರೇಯಾಂಕಿತ ಆಟಗಾರ್ತಿ ಥಾಯ್ಲೆಂಡ್ ನ ರಾಚನೋಕ್ ಇಂಥನಾನ್ ಅವರ ವಿರುದ್ಧ 21-19, 21-19 ಅಂತರದಿಂದ ಗೆಲುವು ಸಾಧಿಸಿ ಫೈನಲ್ ತಲುಪಿದ್ದರು. ಫೈನಲ್ ಪರಾಭವದೊಂದಿಗೆ ಸೈನಾ ರನ್ನರ್ ಅಪ್ ಆಗಿ ಟೂರ್ನಿ ಮುಕ್ತಾಯ ಮಾಡಿದ್ದಾರೆ.