ನವದೆಹಲಿ: ದುಷ್ಕರ್ಮಿಗಳು ತಮ್ಮನ್ನು ಡೋಪಿಂಗ್ ಹಗರಣದಲ್ಲಿ ಸಿಲುಕಿಸಬಹುದು ಎಂಬ ಆತಂಕದಲ್ಲಿರುವ ವಿಶ್ವ ಚಾಂಪಿಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ವೇಟ್ ಲಿಫ್ಟಿರ್ ಮೀರಾಬಾಯಿ ಚಾನು ಅವರು, ರಾಷ್ಟ್ರೀಯ ಶಿಬಿರದಲ್ಲಿರುವ ತಮ್ಮ ಕೋಣೆಯಲ್ಲಿ ಸಿಸಿಟಿವಿ ಅಳವಡಿಸುವಂತೆ ಮನವಿ ಮಾಡಿದ್ದಾರೆ ಎಂದು ಭಾರತೀಯ ವೇಟ್ ಲಿಫ್ಟಿಂಗ್ ಒಕ್ಕೂಟ(ಐಡಬ್ಲ್ಯೂಎಫ್) ಸೋಮವಾರ ತಿಳಿಸಿದೆ.
ಮೀರಾಬಾಯಿ ಚಾನು ಅವರು ಕಳೆದ ನಾಲ್ಕು ವರ್ಷಗಳಲ್ಲಿ 45 ಬಾರಿ ಡೋಪಿಂಗ್ ಪರೀಕ್ಷೆಗೆ ಒಳಗಾಗಿದ್ದು, ಪ್ರತಿಬಾರಿಯೂ ಉತ್ತೀರ್ಣರಾಗಿದ್ದಾರೆ.
ರಾಷ್ಟ್ರೀಯ ಶಿಬಿರದಲ್ಲಿರುವ ಚಾನು ರೂಮ್ ನಲ್ಲಿ ಸಿಸಿಟಿವಿ ಅಳವಡಿಸಲು ಐಡಬ್ಲ್ಯೂಎಫ್ ಒಪ್ಪಿಗೆ ಸೂಚಿಸಿದೆ. ಅಲ್ಲದೆ ತರಬೇತಿ ಸ್ಥಳಗಳಲ್ಲಿ ಮತ್ತು ಊಟದ ಹಾಲ್ ಸೇರಿದಂತೆ ಶಿಬಿರದ ಕೆಲ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದೆ.
ಪಟಿಯಾಲದ ರಾಷ್ಟ್ರೀಯ ಶಿಬಿರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಹೀಗಾಗಿ ಸಿಸಿಟಿವಿ ಅಳವಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಐಡಬ್ಲ್ಯೂಎಫ್ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್ ಅವರು ಪಿಟಿಐಗೆ ತಿಳಿಸಿದ್ದಾರೆ.