ಕ್ರೀಡೆ

ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆ ರಾಜ್ಯದ ಆಟಗಾರ್ತಿ ಆಯ್ಕೆ!

Srinivasamurthy VN
ಬೆಳಗಾವಿ: ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿರುವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕ್ರೀಡಾಕೂಟಕ್ಕೆ ರಾಜ್ಯದ ಉದಯೋನ್ಮುಖ ಆಟಗಾರ್ತಿ ಆರತಿ ಜನೋಬಾ ಪಾಟೀಲ್ ಆಯ್ಕೆಯಾಗಿದ್ದಾರೆ. 
ಕೊಲ್ಲಾಪುರ ಜಿಲ್ಲೆಯ ಕಾನ್ಪುರ ತಾಲ್ಲೂಕಿನ ನಂದಗಡ್ ಗ್ರಾಮದ, ಉಚ್ಘಾನ್ ಪ್ರಾಂತ್ಯದ ನಿವಾಸಿಯಾಗಿರುವ ಆರತಿ ಇದೇ ಇದೇ ಆಗಸ್ಚ್ 20-25ರವರೆಗೂ ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿರುವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. 
22 ವರ್ಷದ ಆರತಿ ದಿವ್ಯಾಂಗ ಆಟಗಾರ್ತಿಯಾಗಿದ್ದು, ಹುಟ್ಟುತ್ತಲೇ ಒಂದು ಕೈ ಅಂಗವೈಕಲ್ಯದಿಂದ ಜನಿಸಿದ್ದರು. ಆದರೆ ಅಂಗ ವೈಕಲ್ಯದ ಹೊರತಾಗಿಯೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಆರತಿ, ತಮ್ಮ ಕಠಿಣ ಪರಿಶ್ರಮದ ಮೂಲಕ ಬ್ಯಾಡ್ಮಿಂಟನ್ ಕ್ರೀಡೆಯನ್ನು ಕರಗತ ಮಾಡಿಕೊಂಡರು. ಬಳಿಕ ತಮ್ಮ ಅದ್ಭುತ ಪ್ರದರ್ಶನದ ಮೂಲಕ ದೇಶದ ವಿವಿಧ ಮೂಲೆಗಳಲ್ಲಿ ನಡೆದ ವಿವಿಧ ಟೂರ್ನಿಗಳಲ್ಲಿ ಆರತಿ ಪ್ರಶಸ್ತಿ ಗೆದ್ದು ರಾಜ್ಯ ಆಯ್ಕೆಗಾರರ ಗಮನ ಸೆಳೆದರು.  2017ರಲ್ಲಿ ದುಬೈನಲ್ಲಿ ನಡೆದ ಏಷ್ಯನ್ ಯೂತ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ಆರತಿ ಬೆಳ್ಳಿ ಪದಕ ಗೆದ್ದಿದ್ದರು.  ಅಂತೆಯೇ ಡೆನ್ಮಾರ್ಕ್‌ನಲ್ಲಿ  ನಡೆದ 2018ರಲ್ಲಿ ವಿಕ್ಟರ್-ಡೆನ್ಮಾರ್ಕ್ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲೂ  ಆರತಿ ಕಂಚಿನ ಪದಕ ಜಯಿಸಿದ್ದರು. ಅಂತೆಯೇ ಕಳೆದ ಏಪ್ರಿಲ್ ನಲ್ಲಿ ಉಗಾಂಡದಲ್ಲಿ ನಡೆದ ಉಗಾಂಡಾ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲೂ ಆರತಿ ಕಂಚಿನ ಪದಕ ಗೆದ್ದಿದ್ದರು. 
ವೀರಯೋಧ ಸಂಗೊಳ್ಳಿ ರಾಯಣ್ಣ ಜನಿಸಿದ ನಂದಗಢ್ ಗ್ರಾಮದಲ್ಲಿ ಬಡಕುಟುಂಬದಲ್ಲಿ ಜನಿಸಿದ ಆರತಿ, ತಮ್ಮ ಕಠಿಣ ಪರಿಶ್ರಮ ಮತ್ತು ಅದ್ಭುತ ಪ್ರತಿಭೆಯಿಂದ ಗಮನ ಸೆಳೆಯುತ್ತಿದ್ದು, ಗ್ರಾಮದ ತುಂಬಾ ವ್ಯಾಪಕ ಖ್ಯಾತಿ ಗಳಿಸಿದ್ದಾರೆ. ಇದೇ ವಿಚಾರವಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಆರತಿ ಅವರು, ನನ್ನ ತಂದೆ ಜನೋಬಾ, ಅಂಕಲ್ ನಾಗೇಂದ್ರ ಸಂಬ್ರೇಕರ್ ಮತ್ತು ಕೋಚ್ ಸುನಿಲ್ ದಿವಾಂಗ್ ಅವರ ನೆರವಿನಿಂದಲೇ ನನ್ನನು ನಾನು ಈ ಕ್ರೀಡೆಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. ನನ್ನ ಆರ್ಥಿಕ ಪರಿಸ್ಥಿತಿ ಕಷ್ಟದಾಯಕವಾಗಿದ್ದರೂ, ನನ್ನ ತಂದೆ ತುಂಬಾ ಕಷ್ಟು ಪಟ್ಟು ಸಾಲ ಮಾಡಿ ನನ್ನನ್ನು ಈ ಮಟ್ಟಿಗೆ ತರಬೇತುಗೊಳಿಸಿದ್ದಾರೆ. ಪ್ರತೀ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದಾಗಲೂ ಅದಕ್ಕಾಗಿ ನನ್ನ ತಂದೆ ಸಾಲ ಮಾಡಿ ಹಣ ನೀಡುತ್ತಾರೆ. ಆದರೆ ಎಂದೂ ಕ್ರೀಡೆಯನ್ನು ಬಿಡು ಎಂದು ಮಾತ್ರ ಹೇಳಿಲ್ಲ. ಅವರ ಈ ಉತ್ತೇಜನವೇ ನನಗೆ ಸ್ಪೂರ್ತಿ. ನಾನು ಇಂದು ಏನೇ ಸಾಧಿಸಿದ್ದರೂ ಅದಕ್ಕೆ ನನ್ನ ಕುಟುಂಬದ ಪರಿಶ್ರಮವೇ ಕಾರಣ ಎಂದು ಹೇಳಿದ್ಜಾರೆ. 
ಅದ್ಭುತ ಪ್ರತಿಭೆಗೆ ಬೇಕಿದೆ ಆರ್ಥಿಕ ನೆರವು
ಇನ್ನು ನಮ್ಮದೇ ರಾಜ್ಯದ ಈ ಅದ್ಬುತ ಪ್ರತಿಭೆ ಆರ್ಥಿಕ ನೆರವಿನ ಅಗತ್ಯತೆ ಇದ್ದು, ಸ್ವಿಟ್ಜರ್ಲೆಂಡ್ ನಲ್ಲಿ ನಡೆಯಲಿರುವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಟೂರ್ನಿಗಾಗಿ ಆರತಿಗೆ ಸುಮಾರು 2.5 ಲಕ್ಷ ರೂಗಳ ಅಗತ್ಯವಿದೆ. ಆ ದೇಶಕ್ಕೆ ತೆರಳಲು ಮತ್ತು ಅಲ್ಲಿ ಉಳಿದುಕೊಂಡು ತನ್ನ ಬೇಕು-ಬೇಡಗಳ ಸಂಭಾಳಿಸಿಕೊಳ್ಳಲು ಆರತಿಗೆ ಹಣದ ಅವಶ್ಯಕತೆ ಇದೆ. ಆರತಿ ಕುಟುಂಬ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಆರತಿಗೆ ಈ ಬಾರಿಯ ಹಣ ಒದಗಿಸಲಾಗದೇ ಪರಿತಪಿಸುತ್ತಿದ್ದಾರೆ. ಆರತಿ ತಂದೆ ಕಟ್ಟಡ ಕೂಲಿ ಕಾರ್ಮಿಕರಾಗಿದ್ದು, ಆರತಿ ಅವರ ತರಬೇತಿ, ವಿವಿಧ ಟೂರ್ನಿಗಳಲ್ಲಿನ ವೆಚ್ಚಕ್ಕಾಗಿ ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. 
ಈ ಬಗ್ಗೆಯೂ ಮಾತನಾಡಿರುವ ಆರತಿ, ಟೂರ್ನಿಗೆ ತೆರಳಲು ಸುಮಾರು 2.5 ಲಕ್ಷ ರೂಗಳ ಹಣ ಬೇಕಾಗುತ್ತದೆ. ಈ ಪ್ರತಿಷ್ಟಿತ ಟೂರ್ನಿಗೆ ದೇಶದಿಂದ ನಾನೂ ಸೇರಿದಂತೆ 21 ಮಂದಿ ಆಟಗಾರರು ಆಯ್ಕೆಯಾಗಿದ್ದು, ಕೋಚ್ ಗಳು, ಮ್ಯಾನೇಜರ್, ಫಿಸಿಯೋಗಳು ಸೇರಿದಂತೆ ಒಟ್ಟು 30 ಮಂದಿ ಇದೇ ಆಗಸ್ಟ್ 15ರಂದು ಸ್ವಿಟ್ಜರ್ಲೆಂಡ್ ಗೆ ಪ್ರಯಾಣ ಮಾಡುತ್ತಿದ್ದೇವೆ. ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ಸಂಸ್ಥೆ ಈ 30 ಮಂದಿಯ ಪೈಕಿ 22 ಮಂದಿಯ ಖರ್ಚು ವೆಚ್ಚ ಮಾತ್ರ ಭರಿಸಲು ಒಪ್ಪಿಗೆ ನೀಡಿದೆ. ಹೀಗಾಗಿ ಉಳಿದ 8 ಮಂದಿಯ ಖರ್ಚು ವೆಚ್ಚ ಅವರೇ ಭರಿಸಿಕೊಳ್ಳಬೇಕು. ಹೀಗಾಗಿ ನನಗೆ 2.5 ಲಕ್ಷ ರೂಗಳ ಅಗತ್ಯತೆ ಇದ್ದು, ನನ್ನ ತಂದೆ ಸಾಲದ ಮೂಲಕ 1 ಲಕ್ಷ ರೂ ಹಣ ಹೊಂದಿಸಿದ್ದಾರೆ. ಇನ್ನೂ 1.5 ಲಕ್ಷ ರೂಗಳ ಹಣದ ಕೊರತೆ ಇದ್ದು, ಯಾರಾದರೂ ದಾನಿಗಳು ಆರ್ಥಿಕ ನೆರವು ನೀಡಿದರೆ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತೇನೆ. ಅಂತೆಯೇ ದೇಶಕ್ಕೆ ಹೆಸರು ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತವೂ ಸೇರಿದಂತೆ ಸುಮಾರು 50 ದೇಶಗಳಿಂದ ನೂರಾರು ಕ್ರೀಡಾಪಟುಗಳು ತಮ್ಮ ತಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ.
SCROLL FOR NEXT