ಕ್ರೀಡೆ

ಡೆವಿಸ್ ಕಪ್: ಪಾಕ್ ವಿರುದ್ಧ ಭಾರತಕ್ಕೆ  4-0 ಅಂತರದ ಅಮೋಘ ಜಯ

Raghavendra Adiga

ನೂರ್ ಸುಲ್ತಾನ್:  ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ಜೀವನ್ ಅವರು ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಪಾಕಿಸ್ತಾನದ ಜೋಡಿಯ ವಿರುದ್ಧ ಗೆಲುವು ಸಾಧಿಸಿದರು. ಡೆವಿಸ್ ಕಪ್ ಟೂರ್ನಿಯ 44ನೇ ಪಂದ್ಯವಾಡಿದ ಪೇಸ್ ತನ್ನ ವೃತ್ತಿ ಜೀವನದ ದಾಖಲೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಡರು. ಡಬಲ್ಸ್ ವಿಭಾಗದ ಗೆಲುವಿನೊಂದಿಗೆ ಭಾರತ 4-0 ಅಂತರದಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸಿತು.

ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಲಿಯಾಂಡರ್ ಪೇಸ್ ಹಾಗೂ ಜೀವನ್ ಜೋಡಿಯು 6-1, 6-3 ಅಂತರದ ನೇರ ಸೆಟ್ ಗಳಲ್ಲಿ ಪಾಕಿಸ್ತಾನ ತರುಣ ಮೊಹಮ್ಮದ್ ಶೊಯೆಬ್ ಹಾಗೂ ಹುಫೈಝಾ ಅಬ್ದುಲ್ ರೆಹಮನ್ ಜೋಡಿಯ ವಿರುದ್ಧ ಗೆಲುವು ಸಾಧಿಸಿತು.

ಕಳೆದ ವರ್ಷ ಲಿಯಾಂಡರ್ ಪೇಸ್ 43 ಪಂದ್ಯಗಳಲ್ಲಿ ಗೆದ್ದು ಡೆವಿಸ್ ಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಜಯ ಸಾಧಿಸಿದ ವಿಶ್ವದ ಮೊದಲ ಟೆನಿಸ್ ಡಬಲ್ಸ್ ಆಟಗಾರ ಎಂಬ ಸಾಧನೆ ಮಾಡಿದ್ದರು. ಇದರೊಂದಿಗೆ ಇಟಲಿಯ ನಿಕೋಲಾ ಪಿಯಾಟ್ರಂಗೇಲಿ ಅವರ ದಾಖಲೆ ಮುರಿದಿದ್ದರು. ಆ ಪಂದ್ಯದಲ್ಲಿ ಭಾರತ ಹಾಗೂ ಚೀನಾ ನಡುವಿನ ಪಂದ್ಯ ಟೈ ಆಗಿತ್ತು.

ಶುಕ್ರವಾರ ನಡೆದಿದ್ದ ಸಿಂಗಲ್ಸ್ ಪಂದ್ಯಗಳಲ್ಲಿ ರಾಮ್‍ಕುಮಾರ್ ರಾಮನಾಥನ್ ಹಾಗೂ ಸುಮಿತ್ ನಗಾಲ್ ಗೆಲುವು ಸಾಧಿಸಿದ್ದರು. ಆ ಮೂಲಕ ಭಾರತ 2-0 ಮುನ್ನಡೆ ಸಾಧಿಸಿತ್ತು. ನಗಾಲ್ 6-1, 6-0 ಅಂತರದಲ್ಲಿ ಸುಲಭವಾಗಿ ಯೂಸಫ್ ಖಲೀಲ್ ವಿರುದ್ಧ ಗೆದ್ದಿದ್ದರು. ಪಾಕಿಸ್ತಾನ ವಿರುದ್ಧ 4-0 ಅಂತರದಲ್ಲಿ ಗೆಲ್ಲುವ ಮೂಲಕ ಭಾರತ ಡೆವಿಸ್ ಕಪ್ ಅರ್ಹತಾ ಸುತ್ತಿಗೆ ಪ್ರವೇಶ ಮಾಡಿದೆ.

SCROLL FOR NEXT