ಕ್ರೀಡೆ

ಬಾಕ್ಸರ್ ಮೇರಿಗೆ ಪದ್ಮವಿಭೂಷಣ, ಸಿಂಧುಗೆ ಪದ್ಮಭೂಷಣ: ಪದ್ಮ ಪ್ರಶಸ್ತಿಗಾಗಿ 9 ಮಹಿಳಾ ಸಾಧಕಿಯರ ಹೆಸರು ಶಿಫಾರಸು

Raghavendra Adiga

ಕ್ರೀಡಾಕ್ಷೇತ್ರದಲ್ಲಿ ಭಾರತದ ಮಹಿಳಾ ಕ್ರೀಡಾಪಟುಗಳ ಅತ್ಯುನ್ನತ ಸಾಧನೆಯನ್ನು ಪರಿಗಣಿಸಲು ಹಾಗೂ ಸಂಭ್ರಮಿಸಲು ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಇದಕ್ಕಾಗಿ ಇದೇ ಮೊದಲ ಬಾರಿಗೆ ದೇಶದ ಪ್ರತಿಷ್ಠಿತ ನಾಗರಿಕ ಪುರಸ್ಕಾರವಾಗಿರುವ ಪದ್ಮ ಪ್ರಶಸ್ತಿಗಳಿಗಾಗಿ ಸಂಪೂರ್ಣ ಮಹಿಳಾ ಕ್ರಿಡಾತಾರೆಯರ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದೆ. ಆರು ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಅವರನ್ನು ಪದರ ವಿಭೂಷಣ್ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದ್ದರೆ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಚಿನ್ನದ ಹುಡುಗಿ  ಪಿ.ವಿ ಸಿಂಧು ಅವರ ಹೆಸರನ್ನು ಪದ್ಮಭೂಷಣಕ್ಕೆ ಶಿಫಾರಸು ಮಾಡಲಾಗಿದೆ.

ಪದ್ಮ ವಿಭೂಷಣ ಭಾರತ ರತ್ನಕ್ಕೆ ಹೊರತಾಗಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದೆ. ಇನ್ನು ಪದ್ಮಭೂಷಣ ಮೂರನೇ ಅತ್ಯುನ್ನತ ನಾಗರಿಕ ಪುರಸ್ಕಾರವೆನಿಸಿದೆ.

ಇದಲ್ಲದೆ ಇನ್ನೂ ಏಳು ಕ್ರೀಡಾಪಟುಗಳನ್ನು ಪದ್ಮಶ್ರೀ ಪ್ರಶಸ್ತಿಗಾಗಿ ಶಿಫಾರಸು ಮಾಡಲಾಗಿದ್ದು ಇದರಲ್ಲಿ ಸಹ ಏಳೂ ಮಂದಿ ಮಹಿಳಾ ಕ್ರೀಡಾತಾರೆಯರೆನ್ನುವುದು ಗಮನಾರ್ಹ. 

ಪದ್ಮಶ್ರೀಗೆ ಶಿಪಾರಸು ಮಾಡಲ್ಪಟ್ಟ ಏಳು ಮಂದಿ ಕ್ರೀಡಾಪಟುಗಳ ಹೆಸರು ಹೀಗಿದೆ- ಕುಸಿಪಟು ವಿನೇಶ್ ಫೋಗಟ್, ಟೇಬಲ್ ಟೆನಿಸ್ ತಾರೆ ಮನಿಕಾ ಬಾತ್ರಾ, ಮಹಿಳಾ ಕ್ರಿಕೆಟರ್  ಹರ್ಮನ್‌ಪ್ರೀತ್ ಕೌರ್ ಹಾಕಿ ತಾರೆ ರಾಣಿ ರಾಂಪಾಲ್, ಮಾಜಿ ಶೂಟರ್ ಸುಮಾ ಶಿರೂರ್ ಮತ್ತು ಪರ್ವತಾರೋಹಿ ಅವಳಿ ಸಹೋದರಿಯರು , ತಾಶಿ ಮತ್ತು ನುಂಗ್ಶಿ ಮಲಿಕ್.

ಮೇರಿ ಕೋಮ್ ಈಗಾಗಲೇ ಬಾಕ್ಸಿಂಗ್ ಜಗತ್ತಿನಲ್ಲಿ ಮಾಡಿದ ಸಾಧನೆಗಳಿಗಾಗಿ 2013 ರಲ್ಲಿ ಪದ್ಮಭೂಷಣ ಹಾಗೂ  2006 ರಲ್ಲಿ ಪದ್ಮಶ್ರೀ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಅವರಿಗೆ ಇದೀಗ ಪದ್ಮವಿಭೂಷಣ ಗೌರವ ಸಿಕ್ಕರೆ ಈ ಗೌರವ ಹೊಂದಿದ ದೇಶದ ನಾಲ್ಕನೇ ಕ್ರೀಡಾಪಟುವೆನಿಸಲಿದ್ದಾರೆ.

ಇನ್ನು ಬ್ಯಾಡ್ಮಿಂಟನ್ ತಾರೆ ಸಿಂಧೂ ಈ ಹಿಂದೆ 2015 ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಈ ಬಾರಿ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲ್ಪಟ್ಟಿದ್ದಾರೆ.

2020 ರ ಜನವರಿ 25 ರ ಗಣರಾಜ್ಯೋತ್ಸವದ ಮುನ್ನಾದಿನದಂದು ಪದ್ಮ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಗೃಹ ಸಚಿವಾಲಯ (ಎಂಎಚ್‌ಎ) ಪ್ರಕಟಿಸುತ್ತದೆ.

SCROLL FOR NEXT